ಮಂಗಳೂರು: ನಗರದ ಬಳ್ಳಾಲ್ ಬಾಗ್ನಲ್ಲಿ ಶನಿವಾರ ತಡರಾತ್ರಿ ಎರಡು ಗುಂಪುಗಳ ನಡುವೆ ನಡುವೆ ಮಾರಾಮಾರಿ ನಡೆದಿದೆ. ರಸ್ತೆ ಮಧ್ಯೆಯೇ ಮಾರಕಾಯುಧಗಳನ್ನು ಹಿಡಿದು ಹೊಡೆದಾಟ ನಡೆಸಿದ್ದಾರೆ. ಈ ಸಂಬಂಧ ಜಗಳ ಬಿಡಿಸಲು ಹೋದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಬಂಧಿತ ಆರೋಪಿಗಳಾಗಿದ್ದಾರೆ.
ಶನಿವಾರ ತಡರಾತ್ರಿ 11.45ರ ಸುಮಾರಿಗೆ ಎರಡು ಗುಂಪುಗಳ ನಡುವೆ ರಸ್ತೆ ಮಧ್ಯೆಯೇ ಮಾರಕಾಯುಧಗಳಿಂದ ಮಾರಾಮಾರಿ ನಡೆದಿತ್ತು. ಈ ವೇಳೆ ಸ್ಥಳಕ್ಕೆ ಬರ್ಕೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಆಗ ಆರೋಪಿ ಧೀರಜ್ ಎಂಬಾತ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಳ್ಳಿ, ಅವರ ಕೈಯಲ್ಲಿದ್ದ ವಾಕಿಟಾಕಿಯನ್ನು ಕಿತ್ತು ನೆಲಕ್ಕೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.
ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಸ್ಥಳದಲ್ಲಿದ್ದ ನಾಲ್ಕು ಚಕ್ರದ ವಾಹನ, ಆರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪುನೀತ್ ಸಮಾಧಿ ಮೇಲೆ ತುಳಸಿ ಗಿಡ ನೆಟ್ಟು ಪೂಜೆ