ಮಂಗಳೂರು: ವಿಶ್ವ ಹಿಂದೂ ಪರಿಷತ್ ಮೂರು ವರ್ಷಗಳಿಗೊಮ್ಮೆ ನಡೆಸುವ ಹಿತಚಿಂತಕರನ್ನು ಜೋಡಿಸುವ ಅಭಿಯಾನ ಇಂದು ನಗರದ ಕದ್ರಿ ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿದರು. ಮಂಗಳೂರಿನಲ್ಲಿ 50 ಸಾವಿರ ಹಿತ ಚಿಂತಕರನ್ನು ಒಂದುಗೂಡಿಸುವ ಗುರಿಯನ್ನು ವಿಶ್ವ ಹಿಂದೂ ಪರಿಷತ್ ಹೊಂದಿದೆ. ಈ ಕಾರ್ಯಕ್ರಮದಲ್ಲಿ ತುಳು ಚಲನಚಿತ್ರ ನಟ, ನಟಿಯರು, ಕ್ರೀಡಾಪಟುಗಳು, ನಾಟಕ ಕಲಾವಿದರು, ಮಾಜಿ ಸೈನಿಕರು, ರಾಜಕಾರಣಿಗಳು ಭಾಗವಹಿಸಿದ್ದರು. ಈ ಅಭಿಯಾನ ಇಂದಿನಿಂದ ಡಿಸೆಂಬರ್ 1ರವರೆಗೆ ನಡೆಯಲಿದೆ.
ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿ ಧರ್ಮ ಇರಬೇಕೆ ಹೊರತು ಜಾತಿಯಲ್ಲ. ನಾನ್ನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲವಿದು ಎಂದು ಹೇಳಿದರು.
ಶ್ರೀರಾಮಚಂದ್ರನ ಅಯೋಧ್ಯೆಯ ಉಳಿವಿಗಾಗಿ ಸುಮಾರು ಒಂದುವರೆ ಸಾವಿರ ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಬಂದಿದೆ. ಇಂದು ಕಾನೂನಿನ ಪರಿಧಿಯೊಳಗೆ ಶ್ರೀರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಪೂರ್ಣಾವಧಿಯ ಕಾಲಘಟ್ಟದಲ್ಲಿ ನಾವಿದ್ದೇವೆ. ಎ.ಪಿ.ಜೆ ಅಬ್ದುಲ್ ಕಲಾಂ ಹಿಂದೂ ಧರ್ಮದಲ್ಲಿ ಹುಟ್ಟಿಲ್ಲವಾದರೂ ಹಿಂದೂ ಧರ್ಮದ ಭಾವನಾತ್ಮಕ ವಿಚಾರಗಳನ್ನು ತನ್ನ ಜೀವನದಲ್ಲಿ ಅಳವಳಿಸಿಕೊಂಡು ಬಂದಿದ್ದರು ಎಂದು ತಿಳಿಸಿದರು.