ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ತಡೆಗೋಡೆ ಕಲ್ಲಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆ ನಗರದ ಹಳೆಯ ಬಂದರಿನ ಧಕ್ಕೆಯ ಅಳಿವೆ ಬಾಗಿಲು ಸಮೀಪ ನಡೆದಿದೆ.
ದೋಣಿಯಲ್ಲಿದ್ದ ಎಲ್ಲಾ 9 ಮೀನುಗಾರರನ್ನು ಕರಾವಳಿ ನಿಯಂತ್ರಣ ದಳದ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಹಳೆಯ ಬಂದರಿನಿಂದ ರಾತ್ರಿ ಮೀನುಗಾರಿಕೆಗೆಂದು ಹೊರಟ ದೋಣಿ ಬೆಳಗಿನ ಜಾವ ದಡಕ್ಕೆ ವಾಪಸ್ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಅಳಿವೆ ಬಾಗಿಲಿನ ತಡೆಗೋಡೆ ಕಲ್ಲಿಗೆ ದೋಣಿ ಡಿಕ್ಕಿ ಹೊಡೆದಿರುವ ಪರಿಣಾಮ ದೋಣಿ ಮಗುಚಿ ಬಿದ್ದು, ದೋಣಿಯೊಳಗೆ ನೀರು ತುಂಬಿತ್ತು. ಅಲ್ಲದೆ ಮೀನುಗಾರರು ಸಹ ನೀರು ಪಾಲಾಗಿದ್ದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಕರಾವಳಿ ಕಾವಲು ಪಡೆಗೆ ಸೇರಿದ ಕರಾವಳಿ ನಿಯಂತ್ರಣ ದಳದ ಪೊಲೀಸರು ಸ್ಥಳೀಯ ಮೀನುಗಾರರ ನೆರವಿನಿಂದ ದೋಣಿಯಲ್ಲಿದ್ದವರನ್ನು ರಕ್ಷಿಸಿದ್ದಾರೆ.