ಕಲಬುರಗಿ : 8.5 ಕೋಟಿ ವೆಚ್ಚದಲ್ಲಿ ವಿಶಾಲ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡದೆ 3 ವರ್ಷದಿಂದ ಅನಾಥವಾಗಿ ಬಿಡಲಾಗಿದ್ದ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಕಟ್ಟಡ ಲೋಕಾರ್ಪಣೆ ಮಾಡಿದ್ದಾರೆ.
ಜುಲೈ 21ರಂದು 'ಜನಪ್ರತಿನಿಧಿಗಳ ತರಬೇತಿಗಾಗಿ ಬೃಹತ್ ಕಟ್ಟಡ ನಿರ್ಮಾಣ : 3 ವರ್ಷವಾದ್ರೂ ಇಲ್ಲ ಉದ್ಘಾಟನೆ ಭಾಗ್ಯ' ಎಂಬ ಶೀರ್ಷಿಕೆಯಲ್ಲಿ ಈಟಿವಿ ಭಾರತ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಶೀಘ್ರವೇ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದ್ದರು.
ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ವರ್ಚುವಲ್ ಮೂಲಕ ಕಟ್ಟಡ ಲೋಕಾರ್ಪಣೆ ಮಾಡಿದ್ದಾರೆ. ಪ್ರಗತಿಪರ ಚಿಂತಕರು ಹಾಗೂ ಸ್ಥಳೀಯರು ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ; ಜನಪ್ರತಿನಿಧಿಗಳ ತರಬೇತಿಗಾಗಿ ಬೃಹತ್ ಕಟ್ಟಡ ನಿರ್ಮಾಣ : 3 ವರ್ಷವಾದ್ರೂ ಇಲ್ಲ ಉದ್ಘಾಟನೆ ಭಾಗ್ಯ
ಕಟ್ಟಡದ ವಿಶೇಷತೆ : ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿ ತರಬೇತಿಗಾಗಿ ನಿರ್ಮಾಣವಾದ ಅಚ್ಚುಕಟ್ಟಾದ ಕಟ್ಟಡವಿದು. ಕಲಬುರಗಿ ಹೊರವಲಯದ ಕೆಸರಟಗಿ ಗ್ರಾಮದ 3.5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರಕ್ಕಾಗಿ 7.05 ಕೋಟಿ ಹಾಗೂ ಜಿಪಂ ಸಂಪನ್ಮೂಲ ತರಬೇತಿ ಕೇಂದ್ರಕ್ಕೆ 1.50 ಕೋಟಿ, ಒಟ್ಟು 8.55 ಕೋಟಿ ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ.
ನೆಲ ಮಹಡಿಯಲ್ಲಿ ಗ್ರಂಥಾಲಯ, ಆಡಳಿತಾತ್ಮಕ ಕೋಣೆ, 5 ಸಾಮಾನ್ಯ ಕೋಣೆ, ಅಡುಗೆ ಕೋಣೆ, ಶೌಚಾಲಯ, ಮೊದಲನೇ ಮಹಡಿಯಲ್ಲಿ 2 ತರಬೇತಿ ಹಾಲ್, 2 ಅತಿಥಿ ಗೃಹ, 12 ಸಾಮಾನ್ಯ ಕೋಣೆ ಮತ್ತು ಸಾಮಾನ್ಯ ಶೌಚಾಲಯ, 2ನೇ ಮಹಡಿಯಲ್ಲಿ 100 ಜನ ಸಾಮರ್ಥ್ಯದ 2 ಡಾರ್ಮಿಟರಿ, 12 ಸಾಮಾನ್ಯ ಕೋಣೆ, ಕಂಪ್ಯೂಟರ್ ಲ್ಯಾಬ್, ತರಬೇತಿ ಕೋಣೆ, ಹೀಗೆ ಒಟ್ಟಾರೆ 43,525 ಚದರ ಅಡಿ ಅಳತೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.
ಮೈಸೂರಿಗೆ ಹೋಗುವುದು ತಪ್ಪಿತು : ಗ್ರಾಪಂ, ತಾಪಂ ಹಾಗೂ ಜಿಪಂಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಕಾಲ-ಕಾಲಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ತರಬೇತಿ ನೀಡಲು ಈ ತರಬೇತಿ ಕೇಂದ್ರ ನಿರ್ಮಿಸಲಾಗಿದೆ.
ಹಿಂದೆಲ್ಲ ತರಬೇತಿ ಪಡೆಯಲು ಈ ಭಾಗದ ಪ್ರತಿನಿಧಿಗಳು ಮೈಸೂರಿಗೆ ಹೋಗಬೇಕಾಗಿತ್ತು. ಈಗ ಕಲಬುರಗಿಯಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ ತೆರೆದಿರುವುದರಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳ ಜನಪ್ರತಿನಿಧಿಗಳು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ.