ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿಯೂ ತಿಳಿಸಿದೆ. ಆದ್ರೆ ಈ ಮರು ಪರೀಕ್ಷೆ ಪೇಪರ್ ಒಂದಕ್ಕೋ, ಪೇಪರ್ ಎರಡಕ್ಕೋ ಅಥವಾ ಫಿಜಿಕಲ್ಗೂ ಇದೆಯೇ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಈ ಬಗ್ಗೆ ನಾನು ಎರಡು ದಿನಗಳ ಹಿಂದೆಯೇ ಕೇಳಿದ್ದೆ. ಈ ಹಿಂದೆಯೂ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಅಂತಾ ಕೆಲ ಅಭ್ಯರ್ಥಿಗಳು ಹೇಳಿದ್ದಾರೆ. ಪ್ರಿಯಾಂಕ್ ಹಿಟ್ ಆ್ಯಂಡ್ ರನ್ ಮಾಡ್ತಿದ್ದಾರೆಂದು ಬಿಜೆಪಿಯವರು ಹೇಳಿದ್ದಾರೆ. ಆದ್ರೆ, ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದ ಅವರು ಆರೋಪಿಸಿದರು.
ಬೆಳಗಾವಿಯಲ್ಲಿ ಈ ಕುರಿತಾಗಿ 02-08-2021ರಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಳಗಾವಿಯಲ್ಲಿ ಬಾಳೆ ಶರಣಬಸಪ್ಪ ದೂರದುಂಡಿ ಎ-1 ಆರೋಪಿ. ಈತನ ಮೇಲೆ ನಿಗದಿತ ಎತ್ತರ ಇರದ ಆರೋಪ ಇದೆ. ತಲೆ ಮೇಲೆ ಮೂರು ವಿಗ್ ಹಾಕಿ ನೇಮಕಾತಿಯಲ್ಲಿ ಬರುವ ಹಾಗೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಬೆಳಗಾವಿ ಮಾರ್ಕೆಟ್ ಸ್ಟೇಷನ್ನಲ್ಲಿ ಎರಡನೇ ದೂರು ದಾಖಲಾಗಿದೆ. ಉಮೇಶ್ ಅನ್ನೋ ಅಭ್ಯರ್ಥಿ ಕೂಡ ಎತ್ತರ ಇಲ್ಲದಿದ್ದರೂ ತಲೆ ಮೇಲೆ ಕರಿ ಬಣ್ಣದ ವಿಗ್ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಲು ಬಂದಿದ್ದ ಎಂದು ದೂರು ನೀಡಲಾಗಿತ್ತು ಎಂದು ಖರ್ಗೆ ಮಾಹಿತಿ ನೀಡಿದರು.
ಸದ್ಯಕ್ಕೆ ಒಂದು ಪರೀಕ್ಷಾ ಕೇಂದ್ರದ ಬಗ್ಗೆ ಮಾತ್ರ ಗಮನಹರಿಸಲಾಗಿದೆ ಅಷ್ಟೇ. ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಬಗ್ಗೆಯೂ ತನಿಖೆ ಮಾಡಬೇಕು. 250ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರದವರೇ ಹೇಳ್ತಿದ್ದಾರೆ. 545 ಜನರಲ್ಲಿ ದೈಹಿಕ ಪರೀಕ್ಷೆ ಪಾಸಾದವರೆಷ್ಟು?. ಯಾರ ಯಾರ ಮೇಲೆ ದೂರಿದೆ, ಅವರ ದೈಹಿಕ ಪರೀಕ್ಷೆ ಮತ್ತೊಮ್ಮೆ ಮಾಡಿ ಎಂದರು.
ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಪ್ರಶ್ನೆ ಪತ್ರಿಕೆಗಳ ಕೋಡ್ ಲೀಕ್ ಮಾಡ್ತಿದ್ದಾರೆ ಎಂದು ಕೆಪಿಎಸ್ಸಿಗೆ ದೂರು ಕೊಟ್ಟಿದ್ದರು. ಇದು ನಡೆದಿರೋದು ಎಫ್‌ಡಿಎ ಪರೀಕ್ಷೆಗಳಿಗೆ. ಈ ಅಕ್ರಮಗಳು ಪ್ರೀ ಪ್ಲಾನ್ ಆಗಿ ನಡೆದಿರೋದು. ಒಂದೇ ಪರೀಕ್ಷಾ ಕೇಂದ್ರದ ತನಿಖೆ ಮಾಡಿ, ಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡ್ತಿದೆ. ಜ್ಞಾನ ಜ್ಯೋತಿ ಸೆಂಟರ್ನಲ್ಲಿ ಈ ಹಿಂದೆ ನಡೆದಿರೋ ನೇಮಕಾತಿ ಪರೀಕ್ಷೆಗಳ ತನಿಖೆ ಮಾಡಬೇಕು. ಈ ಬಗ್ಗೆ ಸರ್ಕಾರ ಗಮನ ಕೊಡದಿದ್ರೆ ವಿದ್ಯಾರ್ಥಿಗಳ ಜೊತೆ ನಾನು ಕೂಡ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ನೀರಾವರಿ ಇಲಾಖೆಯ ಅಧಿಕಾರಿ ಸಿಐಡಿಗೆ ಶರಣಾಗತಿ