ಕಲಬುರಗಿ: ಅನರ್ಹ ಶಾಸಕರ ವಿಚಾರಣೆ ಮುಂದೂಡಿಕೆ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಕಾನೂನು ತನ್ನ ಪ್ರಕ್ರಿಯೆ ಪೂರ್ಣಗೊಳಿಸಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಏನು ತೀರ್ಪು ನೀಡುತ್ತೋ ಕಾದು ನೋಡಬೇಕು. ಅದರ ಬಗ್ಗೆ ನಾನು ಹೆಚ್ಚೇನು ಹೇಳಲ್ಲ ಎಂದರು. ಇನ್ನು ಈ ಪ್ರಕರಣ ವಿಚಾರಣೆಯಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅವರು ಹಿಂದೆ ಸರಿದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದ್ರು.
ಇದೇ ವೇಳೆ ಪ್ರವಾಹದ ಹಿನ್ನೆಲೆ ಬೆಳಗಾವಿ ಅಧಿವೇಶನ ರದ್ದು ಮಾಡಲಾಗಿದೆ. ಬೆಳಗಾವಿಯಲ್ಲಿ ಪ್ರತಿವರ್ಷ ನಡೆಸುತ್ತಿದ್ದ ಚಳಿಗಾಲದ ಅಧಿವೇಶನ ಈ ಬಾರಿ ನಡೆಯುವುದಿಲ್ಲ. ಪ್ರವಾಹದಿಂದ ಅಧಿವೇಶನ ನಡೆಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಬಾರಿ ಅಧಿವೇಶನ ಬೆಂಗಳೂರಿನಲ್ಲಿಯೇ ಮಾಡುವುದಾಗಿ ತಿಳಿಸಿದರು. ಮುಂದಿನ ವರ್ಷ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡುತ್ತೇವೆ ಎಂಬ ಭರವಸೆಯನ್ನು ಸಿಎಂ ಇದೇ ಸಂದರ್ಭದಲ್ಲಿ ನೀಡಿದ್ರು.
ಡಿಕೆಶಿ ಕುರಿತು ಪ್ರತಿಕ್ರಿಯೆಗೆ ನಕಾರ...
ಮಾಜಿ ಸಚಿವ ಡಿ ಕೆ ಶಿವಕುಮಾರ್ಗೆ ಇಡಿ ಉರುಳು ಸುತ್ತಿಕೊಂಡಿರುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಈ ಬಗ್ಗೆ ನನ್ನನ್ನು ಕೇಳಬೇಡಿ ಎಂದರು. ಯಾರ ಬಗ್ಗೆಯೂ ನಾನು ಮಾತನಾಡಲ್ಲ ಎಂದು ಜಾರಿಕೊಂಡರು.