ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಸಿಎಎ, ಎನ್‌ಆರ್‌ಸಿ ಜಾರಿಗೆ ತರುವ ಮೂಲಕ ದೇಶದಲ್ಲಿ ಜಗಳ ಹಚ್ಚಲು ಪ್ರಯತ್ನ ಪಡುತ್ತಿದ್ದಾರೆ ಎಂದು ಸಿಪಿಐಎಂ ಮುಖಂಡ ಬೃಂದಾ ಕಾರಟ್ ಕಿಡಿಕಾರಿದ್ದಾರೆ.
ನಗರದ ಅಮರ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಪೌರತ್ವ ವಿರೋಧಿಸಿ 'ದೇಶಕ್ಕಾಗಿ ನಾವು ಮಹಿಳೆಯರು' ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಧರ್ಮದ ಆಧಾರದ ಮೇಲೆ ದೇಶ ಒಡೆಯುತ್ತಿದ್ದಾರೆ. ಪಾರ್ಲಿಮೆಂಟಿನಲ್ಲಿ ಬಹುಮತ ಇದೆಯೆಂದು ಸಿಎಎ ಜಾರಿಗೆ ತಂದು ಮೋದಿ ಸರ್ಕಾರ ದೇಶದಲ್ಲಿ ಜಗಳ ಹಚ್ಚುತ್ತಿದೆ. ದೇಶದ 120 ಕೋಟಿ ಜನರಿಗೆ ದಾಖಲಾತಿ ತೋರಿಸಿ ಅಂತಾ ಹೇಳುತ್ತಾರೆ. ಮೊದಲು ಸಿಎಎ, ಎನ್‌ಆರ್‌ಸಿ ದೇಶದೆಲ್ಲೆಡೆ ಜಾರಿಯಾಗುತ್ತೆ ಅಂದ್ರು. ದೇಶದ ಜನ ಕೇಳಲು ಪ್ರಾರಂಭ ಮಾಡಿದಾಗ ಇದು ಕೇವಲ ಅಸ್ಸೋಂಗೆ ಸೀಮಿತ ಎಂದು ಕೈಜಾಡಿಸುತ್ತಿದ್ದಾರೆ. ಹೀಗಾಗಿ ಯಾರ ಮೇಲೂ ವಿಶ್ವಾಸವಿಡದೆ ನಾವು ಹೋರಾಟ ಮಾಡಬೇಕಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ದೇಶದ ಸಂವಿಧಾನಕ್ಕೆ ಧಕ್ಕೆ ಬಂದಾಗ ಎಲ್ಲರೂ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಮೋದಿ ಅವರು ಮಾತೆತ್ತಿದರೆ ಶಾಹೀನ್ ಭಾಗ್, ಪಾಕಿಸ್ತಾನ ಎನ್ನುತಾರೆ ಬಹುಶಃ ಅವರಿಗೆ ಈ ಎರಡೇ ಶಬ್ದ ತೆಗೆದುಕೊಳ್ಳದಿದ್ದರೆ ಮೋದಿಗೆ ಉಂಡ ಅನ್ನ ಕರಗೋದಿಲ್ಲ ಅಂತ ಅನಿಸುತ್ತೆ. ಅಮಿತ್ ಶಾ ಆಣತಿಯಂತೆ ದೆಹಲಿ ಪೊಲೀಸರು ನಡೆದಿದ್ದಾರೆ. ದಿಲ್ಲಿ ಪೊಲೀಸರನ್ನ ಬಿಜೆಪಿ ಪೊಲೀಸರನ್ನಾಗಿ ಮಾಡಿಕೊಂಡಿದ್ದಾರೆ ಶಾ ಆರೋಪಿಸಿದರು.
ಬಿಜೆಪಿಯ ಒಬ್ಬ ಮಂತ್ರಿ ಗೋಲಿಮಾರೋ ಸಾಲಂಕೊ ಅಂತಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಶಾಹಿನ್ ಭಾಗ್ ನಲ್ಲಿ ಕುಂತವರನ್ನು ಒಂದು ಗಂಟೆಯಲ್ಲಿ ಖಾಲಿ ಮಾಡ್ತೇವೆ ಅಂತಾರೆ. ಬಿಜೆಪಿ ಪಾರ್ಟಿ ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿದೆ. ಚುನಾವಣೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ಕೆಟ್ಟ ಶಬ್ದ ಬಳಸಿದರೂ ಬಿಜೆಪಿ ನಾಯಕರಿಗೆ ನೋಟಿಸ್ ನೀಡಿಲ್ಲ. ಮಾನವ ಹಕ್ಕುಗಳ ಆಯೋಗವು ಇದರ ಬಗ್ಗೆ ಮಾತನಾಡಿಲ್ಲ ಎಂದು ಕಿಡಿಕಾರಿದರು.