ಕಲಬುರಗಿ: ಕಾಂಗ್ರೆಸ್ನಲ್ಲಿ ಐಟಿ ದಾಳಿಯಾದ ವ್ಯಕ್ತಿಗಳಿಗೆ ಬೆಲೆ ಜಾಸ್ತಿ, ನನ್ನ ಹತ್ರ ರೊಕ್ಕ ಇಲ್ಲ, ರೂಪಾಯಿ ಇಲ್ಲ. ನಮ್ಮನ್ನ ಯಾರ್ ಕೇಳ್ತಾರೆ.. ಇದು ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪರಿ.
ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ಗೆ ಇನ್ನೂ ಡೈವೋರ್ಸ್ ಕೊಟ್ಟಿಲ್ಲ. ಶಿವರಾತ್ರಿ ಮುಗಿದಿದೆ. ನಮ್ಮದು ಇನ್ನೂ ಎರಡು ರಾತ್ರಿ ಇವೆ. ಅದಾದ ಬಳಿಕ ಮಾರ್ಚ್ 12 ರಂದು ಬಹಿರಂಗ ಮಾಡುವೆ. ಮುಂದೆ ಯಾವ ಪಕ್ಷ ಸೇರ್ತೀನಿ ಎಂಬುದನ್ನು ಘೋಷಣೆ ಮಾಡ್ತೀನಿ ಎಂದರು.
ಸಿಎಂ ವಿರುದ್ಧ ಕಿಡಿ: ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಿಡಿಕಾರಿದ ಇಬ್ರಾಹಿಂ, ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ನೀಡಿದೆ. ಆದರೆ, ಉಕ್ರೇನ್ ಮತ್ತು ನರಗುಂದದಲ್ಲಿ ಮೃತಪಟ್ಟ ಯುವಕರಿಗೆ ಸರ್ಕಾರ ಏನು ನೆರವು ನೀಡಿದೆ ಎಂದು ಪ್ರಶ್ನಿಸಿದರು.
ನರಗುಂದದಲ್ಲಿ ಮುಸ್ಲಿಂ ಸಮುದಾಯದ ಯುವಕನನ್ನು ಬಜರಂಗ ದಳದವರು ಹಲ್ಲೆ ಮಾಡಿ ಕೊಂದಿದ್ದಾರೆ. ಆ ಮುಸ್ಲಿಂ ಹುಡುಗನಿಗೆ ಸರ್ಕಾರ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ದೇಶ ಕಾಯುವ ಯೋಧ ಹುತಾತ್ಮರಾದ್ರೂ ಆತ ಮುಸಲ್ಮಾನ ಅನ್ನೋ ಕಾರಣಕ್ಕೆ ನಯಾಪೈಸೆ ಕೊಡಲ್ಲ. ಇದು ನ್ಯಾಯವೇ ಎಂದು ವಾಗ್ದಾಳಿ ಮಾಡಿದರು.
ಉಕ್ರೇನ್ನಲ್ಲಿ ಬಾಂಬ್ ದಾಳಿಯಿಂದ ಮೃತಪಟ್ಟ ಯುವಕನ ಶವ ತರಲು ವಿಮಾನದಲ್ಲಿ ಜಾಗ ಇರಲಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡ್ತಾರೆ ಎಂದು ಹರಿಹಾಯ್ದರು.
ಆಳಂದ ಗಲಭೆ ಕುರಿತು ಪ್ರತಿಕ್ರಿಯೆ: ಆಳಂದದಲ್ಲಿ ನಡೆದ ಗಲಭೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಇಬ್ರಾಹಿಂ, ಪಟ್ಟಭದ್ರ ಹಿತಾಸಕ್ತಿಗಳು ಮತಕ್ಕಾಗಿ ಗಲಭೆ ಎಬ್ಬಿಸುವ ಹುನ್ನಾರವಿದು. ಪೊಲೀಸರು ರಾತ್ರಿ ಮನೆಗಳಿಗೆ ನುಗ್ಗಿ ಬಾಗಿಲು ಒಡೆದು ಹೆಂಗಸರ ಮೇಲೆ ಹಲ್ಲೆ ಮಾಡಿ ಯುವಕರನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಿದರು.
ಆಳಂದ ಪಟ್ಟಣದಲ್ಲಿ ಹೇರಿರುವ ನಿಷೇಧಾಜ್ಞೆಯನ್ನು ತೆರವುಗೊಳಿಸಬೇಕು. ಸಿಪಿಐ, ಡಿವೈಎಸ್ಪಿ ಬದಲಿಸಬೇಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಳಂದಕ್ಕೆ ಭೇಟಿ ನೀಡಿ, ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಓದಿ: ಪ್ರೀತಿಸಿ ಮದುವೆಯಾದ ಅನ್ಯ ಜಾತಿ ಜೋಡಿ.. ಆಕ್ರೋಶದಲ್ಲಿ ಯುವತಿಯ ಅಪ್ಪನಿಂದ ಯುವಕನ ತಂದೆಯ ಕೊಲೆ!