ಸೇಡಂ: ಕೆಕೆಆರ್ಡಿಬಿಗೆ (ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ) ವಿಧಿಸಿರುವ ಷರತ್ತುಗಳಿಂದ ಈ ಭಾಗದ ಅಭಿವೃದ್ಧಿಗೆ ಕಾನೂನು ತೊಡಕುಂಟಾಗುತ್ತಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್ಡಿಬಿಯಲ್ಲಿ ಅನೇಕ ಬದಲಾವಣೆ ತಂದ ಪರಿಣಾಮ ಅಭಿವೃದ್ಧಿ ಕಾರ್ಯಗಳಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾಗಿ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಅವರು ಆಗ್ರಹಿಸಿದರು.
ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಕೆಕೆಆರ್ಡಿಬಿ ಅನುದಾನದಲ್ಲಿ ಆಗುತ್ತಿರುವ ಕಾನೂನು ತೊಡಕುಗಳ ಬಗ್ಗೆ ತಿಳಿಸಿದ್ದೇನೆ. ಮೈಕ್ರೋ, ಮ್ಯಾಕ್ರೋ, ಸೋಷಿಯಲ್ ಹೀಗೆ ವಿವಿಧ ಯೋಜನೆಗಳ ಹೆಸರಲ್ಲಿ ಅನುದಾನ ವಿಂಗಡಿಸಿ ಹಣದ ಸದ್ಬಳಕೆಗೆ ನೂರಾರು ಷರತ್ತು ವಿಧಿಸಲಾಗಿದೆ ಎಂದರು.
ಅನುದಾನ ಪಡೆಯುವಾಗ ಅಧಿಕಾರಿಗಳು ತಡೆಯುತ್ತಿದ್ದಾರೆ. ಹೀಗಾಗಿ ಮಂಡಳಿಯ ಹಣವನ್ನು ಆಯಾ ವರ್ಷದಲ್ಲಿ ಬಳಕೆ ಮಾಡಲಾಗುತ್ತಿಲ್ಲ. ಖಾಲಿ ಹುದ್ದೆಗಳಿಗೆ ಭರ್ತಿ ಮಾಡುತ್ತಿಲ್ಲ. ಮೀಸಲಾತಿ ದೊರೆಯುತ್ತಿಲ್ಲ. ಅಧಿಕಾರಿಗಳ ಬಡ್ತಿಗೆ ವಿಘ್ನ ಎದುರಾದಂತಾಗಿದೆ ಎಂದಿದ್ದಾರೆ.