ಕಲಬುರಗಿ: ರೌಡಿ ಪರೇಡ್ಗೆ ಕುಡಿದು ಬರ್ತಿಯಾ?, ಬಾಲಾ ಕಟ್ ಮಾಡ್ತೀನಿ ಹುಶಾರ್ ಎಂದು ಖಡಕ್ ಆಗಿ ಕಲಬುರಗಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ರೌಡಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಡಿ.ಎ.ಆರ್ ಮೈದಾನದಲ್ಲಿ ಇಂದು ರೌಡಿಗಳ ಪರೇಡ್ ನಡೆಸಿದ ಎಸ್ಪಿ, 98 ರೌಡಿಶೀಟರ್ಗಳಿಗೆ ನೀತಿ ಪಾಠ ಹೇಳಿದರು. ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಬಿ ಹಂತದ ರೌಡಿಶೀಟರ್ಗಳಿಗೆ ಪರೇಡ್ ನಡೆಸಿದ ಅವರು, ರೌಡಿಶೀಟರ್ಗಳ ಅಪರಾಧ ಕೃತ್ಯಗಳ ಮಾಹಿತಿ ಸಂಗ್ರಹಿಸಿದರು. ರೌಡಿ ಪರೇಡ್ಗೆ ಒಂದಿಬ್ಬರು ಕುಡಿದು ಬಂದಿದ್ದರು. ತಕ್ಷಣ ಬ್ರೀತ್ ಟೆಸ್ಟರ್ ತರಿಸಿ ಆಲ್ಕೋಹಾಲ್ ಕುಡಿದವರನ್ನು ಪತ್ತೆ ಹಚ್ಚಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಇದ್ದ ಪ್ರಕರಣ ಮತ್ತು ಹೊಸದಾಗಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಪಡೆದ ಎಸ್ಪಿ ಮಾರ್ಟಿನ್, ಅಪರಾದ ಕೃತ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಕಂಡು ಬಂದರೆ ಗಡಿಪಾರು ಮಾಡ್ತೀನಿ ಹುಷಾರ್ ಅಂತ ಖಡಕ್ ವಾರ್ನಿಂಗ್ ನೀಡಿದರು.
ಬಳಿಕ ಮಾತನಾಡಿದ ಅವರು, ಕೆಲ ರೌಡಿಗಳು 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ನಮ್ಮ ಎಚ್ಚರಿಕೆ ಹೊರತಾಗಿಯೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಗೂಂಡಾ ಕಾಯ್ದೆ ಪ್ರಯೋಗ ಮಾಡಲಾಗುವುದು. 20ಕ್ಕೂ ಹೆಚ್ಚು ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹೇರಿ, 20ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡುವ ಚಿಂತನೆ ನಡೆದಿದೆ. ರೌಡಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.