ಕಲಬುರಗಿ : ಪ್ರವಾಹದಿಂದ ಕಂಗೆಟ್ಟಿರುವ ಕಲಬುರಗಿಯ ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಗ್ರೋ ಕ್ರೇಂದ್ರದ ಮಾಲೀಕ ಮಾಡಿದ ಎಡವಟ್ಟು ರೈತರ ಬದುಕನ್ನು ಕತ್ತಲೆಗೆ ದೂಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಜನ ರೈತರು ಬೆಳೆ ನಾಶದಿಂದಾಗಿ ಸಂಕಷ್ಟ ಅನುಭಸಿದ್ದಾರೆ. ಇತ್ತ ಅಗ್ರೋ ಕೇಂದ್ರದ ಮಾಲೀಕರು ಮಾಡಿದ ಮೋಸದಿಂದ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ವಿ. ಅಗ್ರೋ ಕೇಂದ್ರ ಬಿತ್ತನೆ ಬೀಜ ಮಾರಾಟ ಮಳಿಗೆಯ ಮಾಲೀಕರು ನಮಗೆ ಹೆಸರು ಬೆಳೆಯ ನಕಲಿ ಬೀಜ ನೀಡಿ ನಮ್ಮ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಎಳೆದಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಎಂಬ ರೈತ ಸರಡಗಿ ಗ್ರಾಮದಲ್ಲಿಯೇ ಸುಮಾರು 90 ಎಕರೆಯಷ್ಟು ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಆದರೆ, ಅದು ನಕಲಿ ಬಿತ್ತನೆ ಬೀಜ ಎಂದು ತಿಳಿದು ಬಂದಿದೆ. ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಅಗ್ರೋ ಕೇಂದ್ರದ ಮಾಲೀಕರು ನಮಗೆ ನಕಲಿ ಬೀಜ ನೀಡಿ ಮೋಸ ಮಾಡಿದ್ದಾರೆ.
ನಾವು ಲಕ್ಷಾಂತರ ರೂ. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ, ಬೀಜ ಮಾರಾಟ ಮಳಿಗೆ ಮಾಲೀಕರು ಮಾಡಿದ ಎಡವಟ್ಟಿನಿಂದ ನಮ್ಮ ಬೆಳೆ ಸಂಪೂರ್ಣ ನಾಶವಾಗಿದೆ. ಬಿತ್ತನೆ ಮಾಡಿ ಮೂರು ತಿಂಗಳು ಕಳೆದರೂ ಯಾವುದೇ ಫಲ ದೊರೆತಿಲ್ಲ. ಸಸಿ ಏನೋ ಮೂರ್ನಾಲ್ಕು ಅಡಿ ಎತ್ತರ ಬೆಳೆದಿದೆ. ಆದರೆ, ಹೂವು, ಕಾಯಿ ಬಿಟ್ಟಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಜೀವರ್ಗಿ, ಸೇಡಂ, ಚಿತ್ತಾಪುರ ಸೇರಿ ಹಲವು ತಾಲೂಕುಗಳಲ್ಲಿ ಇದೇ ನಕಲಿ ಬೀಜವನ್ನು ಮಾರಾಟ ಮಾಡಿದ್ದಾರೆ. ಇದರಿಂದ ಸಾವಿರಾರು ಎಕರೆ ಜಮೀನು ಹಾಳಾಗಿದಲ್ಲದೆ, ಬೆಳೆ ಫಲ ಕೊಡದ ಕಾರಣ ಲಕ್ಷಾಂತರ ರೂ. ನೀರಿನಲ್ಲಿ ಹಾಕಿದಂತಾಗಿದೆ. ಹೀಗಾಗಿ, ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು ಹಾಗೂ ನಕಲಿ ಬಿಜೆಪಿ ನೀಡಿ ರೈತರಿಗೆ ಮೋಸ ಮಾಡಿದ ಅಂಗಡಿಯ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಸಂಸದ ಉಮೇಶ್ ಜಾಧವ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲರೂ ನಾಮಕವಾಸ್ತೆ ಎಂಬಂತೆ ಕ್ರಮಕೈಗೊಳ್ಳುತ್ತೇನೆ, ಪರಿಶೀಲನೆ ನಡೆಸುತ್ತೇನೆ ಎಂದು ಹೇಳುತ್ತಿದ್ದಾರೆಯೇ ಹೊರತು ಕ್ರಮಕ್ಕೆ ಯಾರೂ ಮುಂದಾಗಿಲ್ಲ ಎಂದು ರೈತ ಮುಖಂಡರು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅಗ್ರೋ ಕೇಂದ್ರದ ಮಾಲೀಕ ಮಾಡಿದ ಮೋಸದಿಂದ ಬೆಳೆಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಬೀದಿಗೆ ಬಂದಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆ ಫಲ ಕೊಡದ ಹಿನ್ನೆಲೆ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಕೂಡಲೇ ಸರ್ಕಾರ ಪರಿಶೀಲನೆ ನಡೆಸಿ ರೈತರ ನೆರವಿಗೆ ಬರಬೇಕೆಂದು ಎಂದು ರೈತರು ಆಗ್ರಹಿಸಿದ್ದಾರೆ.