ಕಲಬುರಗಿ : ಹೊರಗುತ್ತಿಗೆ ಸಿಬ್ಬಂದಿಗೆ ವೇತನ ನೀಡದೆ ಕಲಬುರಗಿ ಆರೋಗ್ಯ ಇಲಾಖೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಪಾಯ ಲೆಕ್ಕಿಸದೇ ಕೋವಿಡ್ ಐಸಿಯುನಲ್ಲಿ ಕರ್ತವ್ಯ ನಿರ್ವಹಿಸಿರುವ 35 ಜನ ಸಿಬ್ಬಂದಿ ಸಂಬಳಕ್ಕಾಗಿ ನಿತ್ಯ ಪರದಾಡುತ್ತಿದ್ದಾರೆ.
ಹೀಗೆ ಕೈಯಲ್ಲಿ ತಾತ್ಕಾಲಿಕ ನೇಮಕಾತಿ ಪತ್ರ ಹಿಡಿದುಕೊಂಡು ತಮ್ಮ ಅಳಲು ತೋಡಿಕೊಳ್ಳುತ್ತಿರುವ ಇವರೆಲ್ಲ, ಕೋವಿಡ್ ವಿರುದ್ದ ಹೋರಾಡಿ ಸೋಂಕಿತರ ಪ್ರಾಣ ಉಳಿಸಿದವರು. ಆದ್ರೆ, ಕಳೆದ 6 ತಿಂಗಳಿಂದ ಸಂಬಳ ಸಿಗದೆ ನಿತ್ಯ ಪರದಾಡುತ್ತಿದ್ದಾರೆ.
ಕೋವಿಡ್ 2ನೇ ಸಂದರ್ಭದಲ್ಲಿ ಕಲಬುರಗಿ ಆರೋಗ್ಯ ಇಲಾಖೆ, 4 ಜನ ವೈದ್ಯರು, 17 ಜನ ಸ್ಟಾಫ್‌ನರ್ಸ್ ಹಾಗೂ 14 ಜನ ಡಿ ಗ್ರೂಪ್ ನೌಕರರನ್ನ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿತ್ತು.
ಕೆಲಸಕ್ಕೆ ಸೇರಿ 6 ತಿಂಗಳ ಅವಧಿ ಮುಗಿದು ನ.22ರಂದು ಕೆಲಸದಿಂದ ಬಿಡುಗಡೆ ಆಗಿದ್ದಾರೆ. ಆದರೆ, ಆರೋಗ್ಯ ಇಲಾಖೆ ಮಾತ್ರ ಆರು ತಿಂಗಳಿಂದ ನಯಾ ಪೈಸೆ ಸಂಬಳ ಕೊಟ್ಟಿಲ್ಲ. ಹೀಗಾಗಿ, 35 ಜನರು ಸಂಬಳಕ್ಕಾಗಿ ಪ್ರತಿನಿತ್ಯ ಕಲಬುರಗಿ ಡಿಹೆಚ್‌ಒ ಕಚೇರಿಗೆ ಅಲೆಯುತ್ತಿದ್ದಾರೆ. ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯೂ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಈ 35 ಜನರು ಕರ್ತವ್ಯ ನಿರ್ವಹಿಸಿದ್ದಾರೆ. ಇಂದು, ನಾಳೆ ಸಂಬಳ ಆಗಬಹುದು ಅನ್ನೋ ಭರವಸೆಯಿಂದ ಸ್ವಂತ ಹಣ ಖರ್ಚು ಮಾಡಿಕೊಂಡು ಕರ್ತವ್ಯ ನಿರ್ವಹಿಸಿದ್ದೇವೆ. ದಯವಿಟ್ಟು ಸಂಬಳ ಕೊಡಿ ಅಂತಾ ಪರಿ ಪರಿಯಾಗಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಕಲಬುರಗಿ ಡಿಹೆಚ್‌ಒ ಅವರನ್ನ ಕೇಳಿದ್ರೆ ಬಜೆಟ್ ಸಮಸ್ಯೆ ಅಂತಾ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಪ್ರಾಣವನ್ನ ಲೆಕ್ಕಿಸದೆ ಕೋವಿಡ್ ವಿರುದ್ಧ ಹೋರಾಟ ಮಾಡಿರುವ ಇವರು ಸಂಬಳಕ್ಕಾಗಿ ಪರದಾಡುತ್ತಿರುವುದು ವಿಪರ್ಯಾಸ.