ಸೇಡಂ: ರೈತರು ಬೆಳೆದ ತರಕಾರಿಯನ್ನು ಖರೀದಿ ಮಾಡಿ ಬಡವರಿಗೆ ಉಚಿತವಾಗಿ ಹಂಚುವ ಮೂಲಕ ಚಿಂಚೋಳಿ ವ್ಯಾಪ್ತಿಯ ರಟಕಲ್ ಗ್ರಾಮದ ಉದ್ಯಮಿ ಧರ್ಮರಾಜ ಕಲ್ಲಹಂಗರಗಾ ಅವರು ಮಾನವೀಯತೆ ಮೆರೆದಿದ್ದಾರೆ.
ದುಡಿಯುವ ಕೈಗಳಿಗೆ ಕೆಲಸವಿಲ್ಲ. ಕೆಲಸವಿಲ್ಲ ಎಂದರೆ ಹೊಟ್ಟೆಗೆ ಹಿಟ್ಟಿಲ್ಲ. ಸರ್ಕಾರ ಕೊಡುವ ದವಸ ಧಾನ್ಯ ಬೇಯಿಸಲು ಬೇಕಾದ ಸಾಮಗ್ರಿಗಳಿಲ್ಲ, ಇನ್ನು ತರಕಾರಿ ದೂರದ ಮಾತು. ಈ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಿರುವ ಉದ್ಯಮಿ ತಮ್ಮ ಗ್ರಾಮದ ಸುತ್ತಮುತ್ತಲು ರೈತರು ಬೆಳೆಯುವ ತರಕಾರಿಗಳನ್ನು ಖರೀದಿಸಿ ಬಡವರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ಬೆಳೆದ ತರಕಾರಿ ಮಾರಲು ಆಗದೆ ಕೈಕಟ್ಟಿ ಕುಳಿತ ರೈತರಿಗೆ ನೆರವಾಗುವ ಮೂಲಕ, ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ. ಈಗಾಗಲೇ ರೈತರಿಂದ ಈರುಳ್ಳಿ, ಅವರೇಕಾಯಿ, ಬೆಂಡೆಕಾಯಿ, ಸೌತೆಕಾಯಿ, ಕ್ಯಾರೆಟ್, ಬದನೆಕಾಯಿ, ಕೋತಂಬರಿ ಸೇರಿದಂತೆ ಅನೇಕ ಹಸಿ ತರಕಾರಿಗಳನ್ನು ಖರೀದಿಸಿರುವ ಅವರು, ಬಡ ಕುಟುಂಬಗಳನ್ನು ಗುರುತಿಸಿ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಲ್ಲದೆ ಐದು ಸಾವಿರ ಕುಟುಂಬಗಳಿಗೆ ತರಕಾರಿ ಪೂರೈಸುವ ಗುರಿ ಹೊಂದಿದ್ದು, ಇದಕ್ಕೆ ಎಂಟು ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗುತ್ತಿದೆ. ಆದರೆ ರೈತರು ಮತ್ತು ಬಡವರಿಗೆ ನೆರವಾಗುವ ದೃಷ್ಟಿಯಿಂದ ಈ ಕಾರ್ಯ ಮಾಡುತ್ತಿರುವುದಾಗಿ ಧರ್ಮರಾಜ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.