ಕಲಬುರಗಿ: ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಘಟಾನುಘಟಿ ನಾಯಕರು ತಮ್ಮ ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ.
ಇಂದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದರು. ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಬೃಹತ್ ಮೆರವಣಿಗೆಗೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ಮೊದಲು ಬೆಳಗ್ಗೆ ಸಾಂಕೇತಿಕ ನಾಮಪತ್ರ ಸಲ್ಲಿಸಿದ ಜಾಧವ್, ಎರಡನೇ ಭಾರಿ ಬೆಂಬಲಿಗರೊಂದಿಗೆ ಆಗಮಿಸಿ ಸಾಮೂಹಿಕವಾಗಿ ಉಮೇದುವಾರಿಕೆ ಸಲ್ಲಿಸಿದರು. ಮೆರವಣಿಗೆಗೆ ಬಂಜಾರ ಸಮುದಾಯ ಸೇರಿದಂತೆ ಅನೇಕ ಸಮುದಾಯದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಯುವಕರು ಮೈ ಮೇಲೆ ಬಿಜೆಪಿ ಚಿತ್ರ ಬಿಡಿಕೊಂಡು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಮೆರವಣಿಗೆ ಉದ್ದಕ್ಕೂ ಬಂಜಾರ ಸಮುದಾಯದ ಮಹಿಳೆಯರು ನೃತ್ಯ ಮಾಡುವ ಮೂಲಕ ಜಾಧವ್ಗೆ ಬೆಂಬಲಿಸಿದರು.
ಬಿಜೆಪಿಯ ಪ್ರಮುಖರಾದ ಎನ್.ರವಿಕುಮಾರ್, ಮಾಲೀಕಯ್ಯಾ ಗುತ್ತೇದಾರ್, ಬಾಬುರಾವ್ ಚಿಂಚನಸೂರ, ಮಾಲಕರೆಡ್ಡಿ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಅನೇಕರು ಜಾಧವ್ ಅವರಿಗೆ ಸಾಥ್ ನೀಡಿದರು.