ಹುಬ್ಬಳ್ಳಿ : ಈತ ಇನ್ನೂ ಅಮ್ಮನ ಮಡಿಲಲ್ಲಿ ಆಟವಾಡುವ ಪುಟ್ಟ ಕಂದ. ಆದರೆ, ಇವನ ಜ್ಞಾನ ಶಕ್ತಿ ನೋಡಿದ್ರೆ ನಿಜಕ್ಕೂ ಎಂತವರಿಗೂ ಅಚ್ಚರಿ ಆಗುತ್ತದೆ. ತನ್ನದೇ ಆದ ಅಪಾರ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ಮಾಡಿ ತಂದೆ-ತಾಯಿಗೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಹೆಸರು ತಂದಿದ್ದಾನೆ.
ಪಟಾಪಟ್ ಅಂತಾ ಕೇಳಿದ ಪ್ರಶ್ನೆಗೆಲ್ಲ ಉತ್ತರಿಸುವ ತೊದಲು ನುಡಿಯ ಈ ಕಂದನ ಹೆಸರು ಅಥರ್ವ ಎಸ್. ವಾಣಿಜ್ಯನಗರಿ ಹುಬ್ಬಳ್ಳಿಯ ಶಿರೂರ್ ಪಾರ್ಕ್ ನಿವಾಸಿಯಾದ ಪ್ರತಿಭಾ ಹಾಗೂ ಶರಣ್ ಎಂಬ ದಂಪತಿ ಪುತ್ರ. ಅಥರ್ವ್ ತನ್ನ ಅಗಾಧವಾದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ ಮಾಡಿದ್ದಾನೆ.
ಎರಡು ವರ್ಷದ ಈ ಬಾಲಕ ಜನರಲ್ ನಾಲೆಡ್ಜ್, ಅಂಕಿ-ಸಂಖ್ಯೆಗಳನ್ನು ಎಳ್ಳು ಹುರಿದಂತೆ ಹೇಳುತ್ತಾನೆ. ಅಲ್ಲದೇ ವಿಶ್ವದ ಬಹುತೇಕ ರಾಷ್ಟ್ರದ ನಕ್ಷೆಯನ್ನು ನೋಡುತ್ತಲೇ ದೇಶವನ್ನು ಗುರುತಿಸುತ್ತಾನೆ. 2 ವರ್ಷದಲ್ಲಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2022ನಲ್ಲಿ ಸಾಧನೆ ಮಾಡಿರುವುದು ಹೆತ್ತವರ ಹರ್ಷವನ್ನು ಇಮ್ಮಡಿಗೊಳಿಸಿದೆ.
ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎಂಬಂತೆ ಅಮ್ಮನ ಮಡಿಲನ್ನೇ ತನ್ನ ಪಾಠಶಾಲೆಯನ್ನಾಗಿ ಮಾಡಿಕೊಂಡ ಅಥರ್ವ, ಪುಟ್ಟ ವಯಸ್ಸಿನಲ್ಲಿಯೇ ಅರ್ಥಪೂರ್ಣ ಸಾಧನೆ ಮಾಡಿದ್ದಾನೆ. ಈ ಬಾಲಕನ ಸಾಧನೆಗೆ ಪೋಷಕರು ಮಾತ್ರವಲ್ಲದೆ ಹುಬ್ಬಳ್ಳಿಯ ಮಂದಿ ಪ್ರಶಂಸೆ ವ್ಯಕ್ತಪಡಿದ್ದಾರೆ.
ಇದನ್ನೂ ಓದಿ: ಗುಂಡ್ಲುಪೇಟೆ ಬಾಲಕಿಗೆ ಬೇಕಿದೆ ಸಹಾಯಹಸ್ತ: ನೀವು ನೆರವು ನೀಡಿದರೆ ನಿಂತು ಮಾತನಾಡಲಿದ್ದಾಳೆ ಈ ಕಂದಮ್ಮ