ಹುಬ್ಬಳ್ಳಿ: ಮಹಾರಾಷ್ಟ್ರದಿಂದ ನಡೆದುಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಯಿಂದ ಯಾರಿಗೂ ಹೇಳದೆ ಕೇಳದೆ ಪರಾರಿಯಾಗಿರುವ ಘಟನೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ (33) ಎಂಬಾತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದವನಾದ ಮಂಜುನಾಥ್ ಕೊರೊನಾ ಲಾಕ್ಡೌನ್ ಮಧ್ಯದಲ್ಲಿಯೂ ಮಹಾರಾಷ್ಟ್ರದಿಂದ ನಡೆದುಕೊಂಡು ಗ್ರಾಮಕ್ಕೆ ಬಂದಿದ್ದ.
ಹೀಗಾಗಿ ಮನೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಒತ್ತಾಯಿಸಿದ್ದರು. ಮನೆಯವರ ಒತ್ತಾಯಕ್ಕೆ ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದ. ಅಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಅಲ್ಲಿಯೂ ನಿಲ್ಲದೆ ಮಂಜುನಾಥ್ ಪರಾರಿಯಾಗಿದ್ದಾನೆ.
ಮಂಜುನಾಥ್ ಪರಾರಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಮಂಜುನಾಥ್ಗಾಗಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹುಡುಕಾಟ ನಡೆಸುತ್ತಿದೆ.