ಧಾರವಾಡ : ಕಾಳಿ ಸ್ವಾಮೀಜಿಗೆ ಮಸಿ ಬಳಿದ ಪ್ರಕರಣವನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಸ್ವಾಮೀಜಿಗಳು ಕನ್ನಡ ವಿರೋಧಿಯಾಗಿ ಮಾತಾಡಿಲ್ಲ, ನಾನು ಅವರ ಜೊತೆ ಮಾತಾಡಿದ್ದೇನೆ ಎಂದು ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಸುದ್ದಿ ಪ್ರಕಾರ ಅವರು ಕೆಂಪೇಗೌಡರಿಗೆ, ಕುವೆಂಪು ಅವರಿಗೆ ಬೈದಿದಾರೆ ಎಂದಿದೆ. ಆದರೆ, ಆ ರೀತಿ ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ. ಅಕಸ್ಮಾತ್ ಆ ರೀತಿ ಏನಾದರು ಇದ್ದರೆ ದಾಖಲೆ ಬಿಡುಗಡೆ ಮಾಡಬೇಕು. ಯಾರು ದಾಳಿ ಮಾಡಿದ್ದಾರೋ ಅವರು ಬಿಡುಗಡೆ ಮಾಡಲಿ. ಈ ರೀತಿಯ ಹಲ್ಲೆ ಪ್ರಕರಣಗಳು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
ನಿಮಗೆ ಏನಾದರು ನೋವಾಗಿದ್ದರೆ ಕುಳಿತು ಚರ್ಚೆ ಮಾಡಬಹುದು. ತಪ್ಪೆನಿಸಿದ್ದರೆ ಕೇಸ್ ಹಾಕಬಹುದಾಗಿತ್ತು. ಆದರೆ, ಈ ರೀತಿ ಖಾವಿಧಾರಿ ಸನ್ಯಾಸಿಗೆ ಮಸಿ ಬಳಿಯುವಂಥದ್ದು ಅಪರಾಧ. ನೀವು ಕ್ಷಮೆ ಕೇಳಬೇಕು, ಪ್ರಕರಣದಲ್ಲಿ ಯಾರೆಲ್ಲ ಇದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ವಾರಣಾಸಿ ಕೋರ್ಟ್ ತೀರ್ಪು ವಿಚಾರಕ್ಕೆ ಪ್ರತಿಕ್ರಿಯಿಸಿ, ತೀರ್ಪು ಸಮರ್ಪಕವಾಗಿದೆ. ಗೋಡೆ ಮೇಲಿದ್ದ ಹಿಂದೂ ಚಿಹ್ನೆಗಳಿಗೆ ಹತ್ತಾರು ವರ್ಷದಿಂದ ಪೂಜೆ ಮಾಡುತ್ತಾ ಬಂದಿದ್ದರು. ಮುಲಾಯಂ ಸಿಂಗ್ ಅವಧಿಯಲ್ಲಿ ಅದನ್ನು ನಿಲ್ಲಿಸಿದ್ದರು. ಮುಸ್ಲಿಂ ಓಲೈಕೆಗೆ ಪ್ರಯತ್ನ ನಡೆದಿತ್ತು. ಅದಕ್ಕಾಗಿ ಅಲ್ಲಿನವರು ಕೋರ್ಟ್‌ಗೆ ಹೋಗಿ ಸರ್ವೇ ಆದೇಶ ಮಾಡಿಸಿದ್ದರು. ಸರ್ವೇ ಮಾಡಲು ಹೋದಾಗ ತಡೆದಿದ್ದರು. ನಿನ್ನೆ ಸರ್ವೇ ಮಾಡಲು ತೀರ್ಪು ಆಗಿದೆ. ಮೇ 17ರೊಳಗೆ ವರದಿ ಕೊಡಲು ಹೇಳಿದ್ದು ಸ್ವಾಗತಾರ್ಹ ಎಂದರು.
ಅಲ್ಲಿರೋದು ಕಾಶಿ ವಿಶ್ವನಾಥನ ದೇವಸ್ಥಾನ. ಔರಂಗಜೇಬನ ಕಾಲದಲ್ಲಿ ದೇವಸ್ಥಾನ ಒಡೆದು ಮಸೀದಿ ಮಾಡಿದ್ದಾರೆ. ಮಸೀದಿ ಎದುರಿಗೆ ಬಸವಣ್ಣ ಇದ್ದಾನೆ. ಅಲ್ಲಿ ಈಶ್ವರ ಲಿಂಗ ಇತ್ತು ಅನ್ನೋದಕ್ಕೆ ಆ ಬಸವಣ್ಣನೇ ಆಧಾರ. ಜ್ಞಾನವ್ಯಾಪಿ ಮಸೀದಿಯೆಂದು ಹೆಸರಿದೆ. ಅದು ಸಂಸ್ಕೃತ ಶಬ್ದ. ಕೋರ್ಟ್ ಸರ್ವೇಗೆ ಅವಕಾಶ ಕೊಟ್ಟಿದೆ. ಈಗ ತಡೆದರೆ ಬೀಗ ಒಡೆದು ಹೋಗಬೇಕಷ್ಟೇ.. ತಡೆಯೋದು ಯಾಕೆ? ಒಳಗಡೆ ಏನು ಬಾಂಬ್ ಇದೆಯೇ? ಯಾಕೆ ಹೆದರಬೇಕು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕೊನೆಗೂ ಆ್ಯಸಿಡ್ ನಾಗನ ಬಂಧನ.. ಖಾವಿ ಧರಿಸಿ ಧ್ಯಾನ ಮಾಡುತ್ತಿದ್ದಾಗಲೇ ಪೊಲೀಸ್ ಬಲೆಗೆ!
ಸತ್ಯವನ್ನು, ಇತಿಹಾಸವನ್ನು ಮುಸ್ಲಿಂ ಸಮಾಜ ಒಪ್ಪಿಕೊಳ್ಳಬೇಕು. ಈಗಾಗಲೇ ರಾಮಮಂದಿರ ಪೂರ್ಣ ಪ್ರಮಾಣ ಹಿಂದೂಗಳ ಕೈಗೆ ಬಂದಿದೆ. ಅದೇ ಮಾದರಿಯಲ್ಲಿ ಜ್ಞಾನವ್ಯಾಪಿ ಮಸೀದಿ ಕೂಡ ಹಿಂದೂಗಳದ್ದೇ.. ಸ್ನೇಹ, ಸೌಹಾರ್ದತೆಯಿಂದ ಹಿಂದೂಗಳಿಗೆ ಬಿಟ್ಟು ಕೊಡಬೇಕು. ಆಗ ನಮ್ಮ ನಿಮ್ಮಲ್ಲಿ ಬಾಂಧವ್ಯ ಚೆನ್ನಾಗಿರುತ್ತದೆ. ಇಲ್ಲವಾದರೆ ಸಂಘರ್ಷ, ದ್ವೇಷ ಮತ್ತೆ ಉಳಿಯುತ್ತದೆ ಎಂದರು.