ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳ ಸದ್ದು ಹೆಚ್ಚಾಗಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಕಮಿಷನರೇಟ್ ಸಿದ್ಧವಾಗಿದೆ.
ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ಇಂದು 600ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ದೊಡ್ಡ ಮಟ್ಟದ ಕಾರ್ಯಾಚರಣೆಗಿಳಿದಿದ್ದಾರೆ. ಅಪರಾಧ ಕೃತ್ಯಗಳು ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಉತ್ತರ, ದಕ್ಷಿಣ ಹಾಗೂ ಧಾರವಾಡ ಎಸಿಪಿ ವ್ಯಾಪ್ತಿಯ ಪೊಲೀಸರು ನಾಲ್ಕನೇ ದಿನವೂ ಕಾರ್ಯಾಚರಣೆ ನಡೆಸಿದ್ದಾರೆ.
ಅಪರಾಧ ಪ್ರಕರಣಗಳು, ಮೀಟರ್ ಬಡ್ಡಿ ದಂಧೆ, ವೈಯಕ್ತಿಕ ದ್ವೇಷಕ್ಕಾಗಿ ಹಲ್ಲೆ ಮುಂತಾದವುಗಳನ್ನು ಅತಿ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಲಾಬೂರಾಮ್, ಡಿಸಿಪಿಗಳೊಂದಿಗೆ ಸಭೆ ನಡೆಸಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಚಿಸಿದ ಹಿನ್ನೆಲೆಯಲ್ಲಿ ಎಸಿಪಿಗಳಾದ ವಿನೋದ ಮುಕ್ತೆದಾರ, ಆರ್.ಕೆ.ಪಾಟೀಲ ಹಾಗೂ ಅನುಷಾ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪುಡಿ ರೌಡಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಉತ್ತರ ವಿಭಾಗದಲ್ಲೇ ಸುಮಾರು 250ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದು ಕೆಲವೆಡೆ ಮಾರಕಾಸ್ತ್ರಗಳು, ಲಾಂಗ್ ಪತ್ತೆಯಾಗಿವೆ. ಈ ಕುರಿತು ಕಮರಿಪೇಟೆ, ಕೇಶ್ವಾಪುರದಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ. ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಎಸಿಪಿ ಮುಕ್ತೆದಾರ, ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿ 21 ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.