ಹುಬ್ಬಳ್ಳಿ : ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯೊಬ್ಬಳನ್ನು ಶಾಲಾ ಸಮವಸ್ತ್ರ ಧರಿಸಿಕೊಂಡು ಬರಲು ತಿಳಿಸಿ ಮನೆಗೆ ಕಳುಹಿಸಿದ ಘಟನೆ ಹುಬ್ಬಳ್ಳಿ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಸರ್ದಾರ್ ಮೆಹಬೂಬ್ ಅಲಿಖಾನ್ ಶಾಲೆಯ ವಿದ್ಯಾರ್ಥಿನಿ ಸಮವಸ್ತ್ರ ಧರಿಸದೆ ಬುರ್ಕಾ ಧರಿಸಿ ಬಂದಿದ್ದಳು. ತಪಾಸಣೆ ವೇಳೆ ಸಮವಸ್ತ್ರ ಧರಿಸದೆ ಇರುವುದು ಕಂಡು ಬಂದ ಹಿನ್ನೆಲೆ ಸಮವಸ್ತ್ರ ಧರಿಸಿಕೊಂಡು ಬರುವಂತೆ ಅಧಿಕಾರಿಗಳು ಮನೆಗೆ ಕಳುಹಿಸಿದರು. ಬಳಿಕ ಸಮವಸ್ತ್ರ ಧರಿಸಿಕೊಂಡು ಪಾಲಕರ ಜತೆಗೆ ಆಗಮಿಸಿದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದರು.
ಡಿಡಿಪಿಐ ಭೇಟಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರಗಳಿಗೆ ಧಾರವಾಡ ಡಿಡಿಪಿಐ ಎಸ್.ಎಸ್. ಕೆಳದಿಮಠ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಎಲ್ಲ ಕೇಂದ್ರಗಳಲ್ಲಿ ಅಚ್ಚುಕಟ್ಟಾಗಿ ಪರೀಕ್ಷೆ ನಡೆಯುತ್ತಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದರೂ ಸಹಿತ ಅವುಗಳನ್ನ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಸಮವಸ್ತ್ರಗಳನ್ನೇ ನಾವು ಕಡ್ಡಾಯ ಮಾಡಿದ್ದೇವೆ. ಎಲ್ಲಾ ಕೇಂದ್ರಗಳಲ್ಲಿ ಹಿಜಾಬ್ ಗಲಾಟೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ ಎಂದರು.
ಶುಭ ಕೋರಿದ ಸಚಿವ ಮುನೇನಕೊಪ್ಪ : ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಶುಭ ಕೋರಿದರು.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ; ನಮಗೆ ಮಕ್ಕಳ ಭವಿಷ್ಯವೇ ಮುಖ್ಯ ಎಂದ ತಾಯಿ!