ಧಾರವಾಡ : ಚುನಾವಣಾ ಆಯೋಗದ ಆದೇಶದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಸಿದಂತೆ ಚುನಾವಣಾ ಅಧಿಸೂಚನೆಯನ್ನು ನಾಳೆ (ಆ.16) ಹೊರಡಿಸಲಾಗುವುದು.
ಆಕಾಂಕ್ಷಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಾಳೆಯಿಂದಲೇ ಆರಂಭವಾಗಲಿದೆ. ಅಭ್ಯರ್ಥಿಗಳಿಗೆ ಅಗತ್ಯವಿರುವ ವಿವಿಧ ಪರವಾನಿಗೆಗಳನ್ನು ನೀಡಲು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಎರಡು ಪ್ರತ್ಯೇಕ ಏಕಗವಾಕ್ಷಿ ಕೇಂದ್ರಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ. ಅವಳಿ ನಗರದ ಒಟ್ಟು 8,11,537 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ ಎಂದರು.
ಆ.23ರವರೆಗೂ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಆ.24ಕ್ಕೆ ನಾಮಪತ್ರ ಪರಿಶೀಲನೆ. ನಾಮಪತ್ರ ವಾಪಸ್ ಪಡೆಯಲು ಆ.26 ಕೊನೆಯ ದಿನಾಂಕವಾಗಿರುತ್ತದೆ. ಸೆ.3ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅವಶ್ಯ ಬಿದ್ದರೆ ಸೆ.5ಕ್ಕೆ ಮರು ಮತದಾನ, ಸೆ.6ರಂದು ಮತ ಏಣಿಕೆ ಕಾರ್ಯ ನಡೆಯಲಿದೆ ಎಂದರು.
ಚುನಾವಣಾ ಸಮಯದಲ್ಲಿ 16 ಚುನಾವಣಾ ಅಧಿಕಾರಿಗಳು ಮತ್ತು 16 ಸಹಾಯಕ ಚುನಾವಣಾ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿ 3 ಲಕ್ಷ ಹಣ ಖರ್ಚು ಮಾಡಬಹುದು. ಚುನಾವಣಾ ಸಮಯದಲ್ಲಿ ಕೊರೊನಾ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಮೆರವಣಿಗೆ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.