ಹುಬ್ಬಳ್ಳಿ : 'ಹಳ್ಳಿ ಕಡೆ ಜಿಲ್ಲಾಧಿಕಾರಿಗಳ ನಡೆ' ಕಾರ್ಯಕ್ರಮ ಯಶ್ವಸಿಯಾಗಿದೆ. ಮುಂದಿನ ತಿಂಗಳ ವಾಸ್ತವ್ಯ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದೆ. ಕಳೆದ ಬಾರಿ ವಾಸ್ತವ್ಯ ಮಾಡಿದ ವೇಳೆ 35 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ 12-13 ಶಾಸಕರು ನಮ್ಮ ಹಳ್ಳಿಗೆ ಬನ್ನಿ ಅಂತಾ ಕರೆಯುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ವೇಳೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಅಧಿಕಾರ ಇರುವುದರಿಂದ ಸಮಸ್ಯೆಗಳು ಬಗೆಹರಿಯುತ್ತಿವೆ. ಉಳಿದ ಸಚಿವರು ಸಹ ಜನರ ಮನೆ ಬಾಗಿಲಿಗೆ ಅಧಿಕಾರ ತಗೆದುಕೊಂಡು ಹೋಗಬೇಕು. ಈ ಕಾರ್ಯಕ್ರಮ ಯಶ್ವಸಿಯಾದ ನಂತರ ಉಳಿದವರು ನನ್ನ ಯೋಜನೆ ಫಾಲೋ ಮಾಡಬಹುದು ಎಂದರು.
ಪ್ರವಾಹ ಪರಿಸ್ಥಿತಿಯಿಂದ ನಷ್ಟ ಅನುಭವಿಸಿದವರು ಪರಿಹಾರ ಪಡೆಯಲು ಮುಂದುವರೆಯಬೇಕು. ಮೊದಲ ಕಂತು ಪಡೆದವರು ಮನೆ ಕಟ್ಟಲು ಮುಂದಾಗಬೇಕು. ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ಡೌನ್ ಮಾಡುವ ಯೋಚನೆ ಇಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಹೊಸದಾಗಿ ಲೈಸನ್ಸ್ ಹೊಂದಿರುವ 2037 ಸರ್ವೆಯರ್ ನೇಮಕ ಮಾಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ವಾಸ್ತವ್ಯ ಮಾಡಲೇಬೇಕು. ಸೋಮಾರಿತನ, ಅಸಡ್ಡೆ ತೋರುವ ಡಿಸಿಗಳಿಗೆ ಮೈಚಳಿ ಬಿಡಿಸುವೆ ಎಂದು ಎಚ್ಚರಿಸಿದರು.
ಉಪ ಚುನಾವಣೆ ಕುರಿತು ಮಾತನಾಡಿದ ಅವರು, ನಿನ್ನೆ ರಾಜ್ಯದ ಉಸ್ತುವಾರಿ ಅರುಣಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಲೋಕಸಭೆ ಹಾಗೂ ಎಂಎಲ್ಎ ಕ್ಷೇತ್ರಗಳಿಗೆ ನಾನು ಅಭ್ಯರ್ಥಿಗಳ ಹೆಸರು ಸೂಚಿಸಿರುವೆ. ಕೇಂದ್ರದಿಂದ ಅಭ್ಯರ್ಥಿಗಳ ಅಯ್ಕೆ ಪಟ್ಟಿ ಬಿಡುಗಡೆಯಾಗಲಿದೆ.
ಜನರಿಗೂ ಸಹ ಗೊತ್ತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಯಾಕೆ ಹೆಚ್ಚಾಗಿದೆ ಅಂತಾ ತಿಳಿದಿದ್ದಾರೆ. ದೇಶದ ಜನರಿಗೆ ಮೋದಿಯವರ ಮೇಲೆ ಭರವಸೆ ಇದೆ ಎಂದು ಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.