ಹುಬ್ಬಳ್ಳಿ: ನಗರದ ಜನತಾ ಕಾಲೋನಿಯ ಶಿಲ್ಪಾ ಚಲವಾದಿ ಎಂಬುವರನ್ನು ಕಳೆದ ಏಳು ತಿಂಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿಯ ಅನಿಲ್ ಚಲವಾದಿ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದಾಗಿನಿಂದಲೂ ಅನಿಲ್ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಪೀಡಿಸುತ್ತಿದ್ದರು. ಆದರೆ ನ. 18 ರಂದು ಪತಿ ಅನಿಲ್ ಹಾಗೂ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಒತ್ತಾಯಿಸಿದ್ದಾರೆ. ಆಗ ಶಿಲ್ಪಾ ವರದಕ್ಷಿಣೆ ತರಲು ಆಗುವುದಿಲ್ಲ ಎಂದು ಹೇಳಿದ್ದಾಳೆ. ಅದಕ್ಕೆ ಗಂಡ ಹಾಗೂ ಆತನ ಮನೆಯವರು ಆಕೆಗೆ ವಿಷ ಕುಡಿಸಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡುತ್ತಿದ್ದಾರೆ ಎಂದು ಶಿಲ್ಪಾ ಮನೆಯವರು ಆರೋಪಿಸಿದ್ದಾರೆ.
ಬೆಳಗಾವಿಯ ನಂದಗಡದಲ್ಲಿ ಘಟನೆ ನಡೆದಿದ್ದು, ಹುಬ್ಬಳ್ಳಿಯ ತಾಯಿ ಮನೆಗೆ ಪಾರ್ಥಿವ ಶರೀರವನ್ನು ತರಲಾಗಿದೆ. ಈ ವೇಳೆ ಮಗಳ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಶಿಲ್ಪಾ ಪತಿ ಅನಿಲ್ ವಿರುದ್ಧ ಬೆಳಗಾವಿಯ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಶಿಲ್ಪಾ ಸಂಬಂಧಿಗಳು ಒತ್ತಾಯಿಸುತ್ತಿದ್ದಾರೆ.