ಧಾರವಾಡ: ರಾಜ್ಯಸಭಾ ಚುನಾವಣೆ ಹಿನ್ನೆಲೆ ಕುಮಾರಸ್ವಾಮಿ ಕೋಮುವಾದಿಗಳನ್ನ ಸೋಲಿಸಲು ಕೈ-ತೆನೆ ಒಂದಾಗಬೇಕು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾವು ಯಾವತ್ತಿಗೂ ಕೋಮುವಾದಿಗಳನ್ನ ವಿರೋಧಿಸುತ್ತೇವೆ. ಜೆಡಿಎಸ್ಗಿಂತ ಮೊದಲೇ ನಾವು ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿಯನ್ನು ಹಾಕಿದ್ದೇವೆ ಎಂದು ಹೇಳಿದರು.
ಈ ಕುರಿತು ಮಾತನಾಡಿದ ಅವರು, ಅವರು ಕೋಮುವಾದಿ ಅಭ್ಯರ್ಥಿ ಸೋಲಿಸಬೇಕು ಎಂಬ ಇಚ್ಛೆ ಇದ್ದರೆ ಅವರು ಅಭ್ಯರ್ಥಿ ಹಾಕಬೇಕಿರಲಿಲ್ಲ. ನಾವು ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಿದ್ದು, ಅವರನ್ನು ಗೆಲ್ಲಿಸಲು ಕುಮಾರಸ್ವಾಮಿ ಕೈಜೋಡಿಸಲಿ ಎಂದು ಹೇಳಿದರು.
ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ? ಎಂದು ಪಶ್ನಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಬಳಿ 37 ಜನ ಇದ್ದರೂ ಕೂಡ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ನಾವು ಅವರನ್ನೇ ಸಿಎಂ ಮಾಡಿದ್ದೆವು. ದೇವೇಗೌಡರು ಪ್ರಧಾನ ಮಂತ್ರಿಯಾಗಲು ನಾವು ಬೆಂಬಲ ನೀಡಿದ್ದೇವೆ. ನಮಗೆ ಈಗ ಅವರು ಬೆಂಬಲ ಕೊಡಲಿ ಎಂದರು.
ಯಡಿಯೂರಪ್ಪ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಅವರು, ನಮ್ಮದು ಹಲೋ ಹಲೋ ಭೇಟಿ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಗುರಿಕಾರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಎಲ್ಲರೂ ಈ ಬಾರಿ ಬದಲಾವಣೆ ಬಯಸಿದ್ದಾರೆ. 30 ವರ್ಷದಿಂದ ಶಿಕ್ಷಕರ ಪರವಾಗಿ ಹೋರಾಡಿದ ವ್ಯಕ್ತಿ ಅವರು ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ: 'ಬಿಜೆಪಿ ಬಿ ಟೀಂನ ಕ್ಯಾಪ್ಟನ್, ಆಪರೇಷನ್ ಕಮಲಯ್ಶ, ಸಿದ್ಧ ಸೂತ್ರಧಾರ': ಸಿದ್ದು ವಿರುದ್ಧ ಹೆಚ್ಡಿಕೆ ವಾಗ್ದಾಳಿ