ಹುಬ್ಬಳ್ಳಿ: ಭೀಕರ ಪ್ರವಾಹದ ಸಂದರ್ಭದಲ್ಲಿ ರಾಜ್ಯಕ್ಕೆ ಆಗಮಿಸದೆ, ಇದೀಗ ಚಂದ್ರಯಾನ ವೀಕ್ಷಿಸಲು ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ವ್ಯಂಗ್ಯವಾಗಿ ಸ್ವಾಗತ ಕೋರುವ ಬ್ಯಾನರ್ಗಳನ್ನು ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹು-ಧಾ ಮಹಾನಗರ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಅವರ ನೇತೃತ್ವದಲ್ಲಿ ಈ ರೀತಿ ಪ್ರಧಾನಿಯನ್ನು ಸ್ವಾಗತಿಸುತ್ತಿದ್ದು, ರಾಜ್ಯದ ಮೇಲಿನ ಕೇಂದ್ರದ ನಿರ್ಲಕ್ಷ್ಯ ಭಾವನೆಯನ್ನು ಬ್ಯಾನರ್ಗಳಲ್ಲಿ ವ್ಯಂಗ್ಯವಾಗಿ ಬರೆದು ನಗರದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ರಾಜ್ಯದಲ್ಲಿ ನೆರೆ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಸಾವಿರಾರು ಕೋಟಿ ಮನೆ ಮಠ, ಆಸ್ತಿ ಪಾಸ್ತಿ ಹಾಳಾಗಿವೆ. ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ಹೀಗಿದ್ದಾಗಲು ರಾಜ್ಯಕ್ಕೆ ಸಮಯಕ್ಕೆ ಸರಿಯಾಗಿ ಭೇಟಿ ನೀಡಿ ನೆರೆಯಲ್ಲಿ ನೊಂದವರ ಕಣ್ಣೀರು ಒರೆಸಲು ಮುಂದಾಗದೆ, ಇದೀಗ ಚಂದ್ರಯಾನ ವೀಕ್ಷಿಸಲು ಕರ್ನಾಟಕ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಸುಸ್ವಾಗತ ಎಂದು ಬ್ಯಾನರ್ನಲ್ಲಿ ಬರೆಯುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.