ಹುಬ್ಬಳ್ಳಿ: ಮೂರುಸಾವಿರ ಮಠದ ಆಸ್ತಿಯನ್ನು ಹೊಡೆಯಲು ಸಾಕಷ್ಟು ಜನರು ಹೊಂಚು ಹಾಕಿದ್ದಾರೆ. ಕೆಲವರು ಆಸ್ತಿಯನ್ನು ಬರೆಸಿಕೊಂಡಿದ್ದಾರೆ. ಅಲ್ಲದೇ ಕೆಎಲ್ಇ ಸಂಸ್ಥೆಯವರು ಕೂಡ ಕಾಲೇಜು ಕಟ್ಟಡಕ್ಕೆ ಮೂರು ಸಾವಿರ ಮಠದ ಆಸ್ತಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ಜೀವ ಇರುವವರೆಗೂ ಮೂರುಸಾವಿರ ಮಠದ ಆಸ್ತಿಯನ್ನು ಕಬಳಿಸಲು ಬಿಡುವುದಿಲ್ಲ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆ ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಕೆಎಲ್ಇ ಸಂಸ್ಥೆಯವರು ಮೂರುಸಾವಿರ ಮಠದ 24 ಎಕರೆ ಜಮೀನನ್ನು ಬಳಸಿಕೊಂಡು ಕಾಲೇಜು ಕಟ್ಟಿಸಲು ಮುಂದೆ ಬಂದಿದೆ. ಆದರೆ, ಕೆಎಲ್ಇ ಸಂಸ್ಥೆ ಬೆಳೆಯಬೇಕು. ಅದೇ ರೀತಿ ಮೂರುಸಾವಿರ ಮಠದ ಆಸ್ತಿಯೂ ಉಳಿಯಬೇಕು. ಈ ಹಿನ್ನೆಲೆಯಲ್ಲಿ ಕಾಲೇಜು ಕಟ್ಟಿಸಲು ಮೂರುಸಾವಿರ ಮಠದ ಜಾಗ ಬೇಡ ಎಂದರು.
ಈಗಾಗಲೇ ಹುಬ್ಬಳ್ಳಿಯಲ್ಲಿ ಕಾಡಸಿದ್ದೇಶ್ವರ ಕಾಲೇಜು ಹಾಗೂ ಗಂಗಾಧರ ಕಾಲೇಜಿಗೆ ಮೂರುಸಾವಿರ ಮಠ ಜಾಗ ಕೊಟ್ಟಿದೆ. ಎಲ್ಲ ಕಾಲೇಜಿಗೂ ಜಾಗ ಕೊಡುವಷ್ಟು ಆರ್ಥಿಕವಾಗಿ ಸದೃಢವಾಗಿಲ್ಲ. ಒಂದು ವೇಳೆ ಮೆಡಿಕಲ್ ಕಾಲೇಜು ಕಟ್ಟಲೇಬೇಕು ಎಂದಾದರೆ ಮೂರುಸಾವಿರ ಮಠದ ಆಡಳಿತದ ಅಡಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಿ ಅದಕ್ಕೆ ನಮ್ಮ ಸ್ವಾಗತವಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಜೂಜಾಟದ ಚಟಕ್ಕೆ ದಾಸನಾದ 'ಆಟೋ ಚಾಲಕ' ಹಣಕ್ಕಾಗಿ ಮಾಡಿದ್ದೇನು?
ಹಿಂದೂ ಮುಸ್ಲಿಂ ಗಲಾಟೆಯನ್ನು ಹತ್ತಿಕ್ಕುವ ಸಾಕಷ್ಟು ಜನಪರ ಕಾರ್ಯಗಳನ್ನು ಮೂರುಸಾವಿರ ಮಠ ಮಾಡಿದೆ. ಮೂರುಸಾವಿರ ಮಠವು ದಾನ ಮಾಡುವಷ್ಟು ಆರ್ಥಿಕವಾಗಿ ಸದೃಢವಾಗಿಲ್ಲ. ಅಲ್ಲದೇ ಆಸ್ತಿಯನ್ನು ಮಾರಿ ಮೂರುಸಾವಿರ ಮಠದ ಅಭಿವೃದ್ಧಿ ಮಾಡಬೇಕು ಎಂಬುವಂತಹ ಪರಿಸ್ಥಿತಿ ಇದ್ದರೆ ನಾನು ನೂರು ಹಳ್ಳಿಗಳ ಭಿಕ್ಷೆ ಬೇಡಿ ತಂದು ಮಠಕ್ಕೆ ನೀಡುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಮಠದ ಆಸ್ತಿಯನ್ನು ಹಾಳಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.
ಈಗಾಗಲೇ ಸಾಕಷ್ಟು ಕೈಗಳು ಮೂರುಸಾವಿರ ಮಠದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿವೆ. ಕೆಲವರು ಈಗಾಗಲೇ ಮೂರುಸಾವಿರ ಮಠದ ಆಸ್ತಿಯನ್ನು ಬರೆಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ದಾಖಲೆ ಸಮೇತ ಯಾರು ಆಸ್ತಿಯನ್ನು ತಿಂದಿದ್ದಾರೆ ಎಂದು ತಿಳಿಸುತ್ತೇನೆ ಎಂದ ಅವರು, ಕೆಎಲ್ಇ ಸಂಸ್ಥೆಯವರು ಕೂಡಲೇ ಈ ನಿರ್ಧಾರವನ್ನು ಕೈ ಬಿಟ್ಟರೆ ಸಂಸ್ಥೆಗೂ ಒಳ್ಳೆಯದು ಮೂರುಸಾವಿರ ಮಠಕ್ಕೂ ಒಳ್ಳೆಯದು. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೇ ಮುಂಬರುವ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.