ಹುಬ್ಬಳ್ಳಿ : ಅದು ನಿಜಕ್ಕೂ ದೊಡ್ಡ ದುರಂತವನ್ನೇ ಸೃಷ್ಟಿಸಿದ ಅಪಘಾತ. ಆ ಅಪಘಾತ ಅದೆಷ್ಟೋ ಕನಸಿನ ಗೋಪುರಗಳನ್ನು ನೆಲಸಮ ಮಾಡಿದೆ. ಭವಿಷ್ಯದಲ್ಲಿ ಸಾಕಷ್ಟು ಕನಸನ್ನು ಹೊತ್ತಿದ್ದ ಆ ಜೀವಗಳು ಅಪಘಾತದಲ್ಲಿ ಜೀವವನ್ನೇ ಕಳೆದುಕೊಂಡಿವೆ. ನಿಶ್ಚಿತಾರ್ಥಕ್ಕೆಂದು ತೆರಳಿದವರು ಇಂದು ಮಸಣ ಸೇರಿದ್ದಾರೆ.
ಒಂದು ಕಡೆ ಕಿಮ್ಸ್ ಶವಗಾರದ ಮುಂದೆ ಕಣ್ಣೀರು ಹಾಕುತ್ತಿರುವ ಸಂಬಂಧಿಕರು. ಇನ್ನೊಂದೆಡೆ ಮಕ್ಕಳನ್ನು ಕಳೆದುಕೊಂಡ ಕಣ್ಣೀರಿಡುತ್ತಿರುವ ಹೆತ್ತವರು. ಇವೆಲ್ಲದಕ್ಕೂ ಕಾರಣವಾಗಿದ್ದು, ಧಾರವಾಡ ಜಲ್ಲೆಯ ಬಾಡ ಗ್ರಾಮದ ಹತ್ತಿರ ನಡೆದ ಭೀಕರ ರಸ್ತೆ ಅಪಘಾತ. ಹೌದು.. ನಿನ್ನೆಯಷ್ಟೇ ನಡೆದ ಅಪಘಾತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, ಐದಾರು ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಅಪಘಾತದಲ್ಲಿ ಒಡಹುಟ್ಟಿದ ಮಧುಶ್ರೀ ಹಾಗೂ ಮನುಶ್ರೀ ಎಂಬ ಸಹೋದರಿಯರು ಸಾವನ್ನಪ್ಪಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಹೆತ್ತವರಿಗೆ ಮುತ್ತಿನಂತಿದ್ದ ಈ ಇಬ್ಬರೂ ಹೆಣ್ಣು ಮಕ್ಕಳು ಮದುವೆಗೆಂದು ಹೋದವರು ಇದೀಗ ಮಸಣ ಸೇರಿದ್ದಾರೆ. ವಿಧಿಯ ಆಟಕ್ಕೆ ಸರಣಿ ಸಾವುಗಳು ಸಂಭವಿಸಿದ್ದು, ಬಾಲ ಯೋಗ ಪ್ರತಿಭೆ ಅನನ್ಯಾ ಕೂಡ ಅಪಘಾತದಲ್ಲಿ ಅಸುನೀಗಿದ್ದಾಳೆ.
ಇನ್ನು ಈಗಾಗಲೇ ಮದುವೆ ಮನೆಯಲ್ಲಿ ಹರ್ಷದಿಂದ ಓಡಾಡಬೇಕಿದ್ದವರು ಮಸಣ ಸೇರಿದ್ದು ದುರದೃಷ್ಟವೇ ಸರಿ. ಅಣ್ಣನ ಮದುವೆಯಲ್ಲಿ ಅತ್ತಿತ್ತ ಓಡಾಡಬೇಕಿದ್ದ ತಂಗಿಯರು. ಚಿಕ್ಕಪ್ಪನ ಮದುವೆಯಲ್ಲಿ ಓಡಾಡಬೇಕಿದ್ದ ಅಣ್ಣನ ಮಕ್ಕಳು, ಮನೆಗೆ ಮತ್ತೊಬ್ಬ ಸಹೋದರಿಯ ಆಗಮನವನ್ನು ಎದುರು ನೋಡುತ್ತಿದ್ದ ಅತ್ತಿಗೆಯರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಅಲ್ಲದೇ ಧಾರವಾಡದಲ್ಲಿ ಇಂತಹದೊಂದು ದೊಡ್ಡ ಅಪಘಾತ ಸಂಭವಿಸಿದರೂ ಸಾಂತ್ವನ ಹೇಳಲು ಯಾವುದೇ ಜನ ಪ್ರತಿನಿಧಿಗಳು ಬಾರದೇ ಇರುವುದು ಗ್ರಾಮಸ್ಥರ ಹಾಗೂ ಸಂಬಂಧಿಕರು ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಇಂತಹದೊಂದು ಅಪಘಾತದಿಂದಾಗಿ ಜಿಲ್ಲೆಯೇ ಕಣ್ಣೀರು ಹಾಕುವಂತಾಗಿದೆ. ಸತ್ತವರಲ್ಲಿ ವಯಸ್ಕರು ಹಾಗೂ ಮಕ್ಕಳೇ ಹೆಚ್ಚಾಗಿರುವುದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ ದುರ್ವಿಧಿಯೇ ನಿನಗೆ ಕರುಣೆ ಬಾರದೇ ಹೋಯಿತೆ ಎಂದು ಊರಿಗೆ ಊರೇ ದೇವರಿಗೆ ಶಾಪ ಹಾಕುವಂತಾಗಿದೆ.
ಓದಿ : ಶಾಪಿಂಗ್ ಕಾಂಪ್ಲೆಕ್ಸ್ನಿಂದ ಬಿದ್ದು ಯುವತಿ ಸಾವು: ರಕ್ಷಿಸಲು ಬಂದ ಯುವಕನೂ ಕೆಳಗೆ ಬಿದ್ದ!