ಹುಬ್ಬಳ್ಳಿ : ಉದ್ಯೋಗ ಸಾಮ್ರಾಟ ಎಂದೇ ಖ್ಯಾತಿ ಪಡೆದ ಇನ್ಫೋಸಿಸ್ ಆರಂಭಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಯಾನದ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಈಗ ಇನ್ಫೋಸಿಸ್ ಕ್ಯಾಂಪಸ್ ಆರಂಭಿಸುವುದಕ್ಕೆ ಒತ್ತಾಯಿಸಿ, ಸ್ಟಾರ್ಟ್ ಇನ್ಫೊಸಿಸ್ ತಂಡದಿಂದ ಮುಖ್ಯಮಂತ್ರಿಯವರಿಗೆ 10,000 ಪತ್ರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಹುಬ್ಬಳ್ಳಿ - ಧಾರವಾಡದ ಶಾಲಾ ಕಾಲೇಜುಗಳಿಂದ ಎರಡೇ ದಿನಗಳಲ್ಲಿ 1000 ಕ್ಕೂ ಹೆಚ್ಚು ಪತ್ರಗಳನ್ನು ಸಂಗ್ರಹಿಸಲಾಗಿದೆ. ಹುಬ್ಬಳ್ಳಿ-ಧಾರವಾಡದ ಪ್ರಥಮ ನಾಗರಿಕರ ಇರೇಶ ಅಂಚಟಗೇರಿಯವರು ಸಹ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಅವರೇ ಖುದ್ದಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರ ಬರೆದು 'ಇನ್ಫೋಸಿಸ್ ಹುಬ್ಬಳ್ಳಿ ಘಟಕ ಶೀಘ್ರ ಕಾರ್ಯಾರಂಭ ಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು' ಮನವಿ ಸಲ್ಲಿಸಿದರು.
ಮುಂದಿನ 15 ದಿನಗಳಲ್ಲಿ ಅವಳಿನಗರದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. change.org/startinfyhubli ನಲ್ಲಿ ಈಗಾಗಲೇ 5,500ಕ್ಕಿಂತಲೂ ಹೆಚ್ಚು ಜನ ಸಹಿ ಮಾಡಿ ಅಭಿಯಾನಕ್ಕೆ ಬೆಂಬಲಿಸಿದ್ದಾರೆ. ಜೊತೆಗೆ 10,000 ಜನರು ಸಹಿ ಹಾಕಿದ ಪೋಸ್ಟ್ ಕಾರ್ಡ್ಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿ ಅವರ ವಿಧಾನಸೌಧದ ಕಚೇರಿಗೆ ಕಳುಹಿಸಲಾಗುವುದು ಎಂದು ಅಭಿಯಾನದ ನೇತೃತ್ವ ವಹಿಸಿರುವ ಸಂತೋಷ ನರಗುಂದ ಹಾಗೂ ರೆಡ್ ಎಫ್ ಎಮ್ ರೇಡಿಯೋ ಜಾಕಿ ರಶಿದ್ ಅವರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆರಂಭಕ್ಕೆ ಒತ್ತಾಯಿಸಿ ಒಂದಿಲ್ಲೊಂದು ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಇನ್ನಾದರೂ ಉದ್ಯೋಗ ಸಾಮ್ರಾಟ್ ಇನ್ಫೋಸಿಸ್ ಕಾರ್ಯಾರಂಭ ಮಾಡುವ ಮೂಲಕ ಇಲ್ಲಿನ ಯುವ ಸಮುದಾಯದ ಕನಸನ್ನು ಸಾಕಾರಗೊಳಿಸುವ ಮೂಲಕ ಅವಳಿ ನಗರದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.
ಇದನ್ನೂ ಓದಿ : ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಏರಿಸಿ ಸರ್ಕಾರದ ಆದೇಶ