ಹುಬ್ಬಳ್ಳಿ: ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದ ಜಿಲ್ಲೆ ಧಾರವಾಡ. ಈ ಜಿಲ್ಲೆಯಲ್ಲಿ ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಬೆಳೆಯುತ್ತಿರುವ ರೀತಿಯಲ್ಲಿ ಅಪರಾಧ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಕಳೆದ ಐದು ವರ್ಷ ಜಿಲ್ಲೆಗೆ ಕರಾಳ ವರ್ಷವಾಗಿಯೇ ಪರಿಣಮಿಸಿದೆ. ಬಡ್ಡಿಗೆ ಪಡೆದ ಹಣ ಮರಳಿ ನೀಡದಿರುವುದು, ಕೌಟುಂಬಿಕ ಕಲಹ, ಪ್ರೀತಿ ನಿರಾಕರಣೆ, ಮದ್ಯದ ನಶೆ, ವಿವಾಹೇತರ ಸಂಬಂಧದ ಜೊತೆಗೆ ಕ್ಷುಲ್ಲಕ ಕಾರಣ ಹೀಗೆ ಹಲವಾರು ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 188 ಮಂದಿ ಹತ್ಯೆಗೀಡಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ 88 ಮಂದಿ, ಧಾರವಾಡ ಜಿಲ್ಲೆಯ ವಿವಿಧೆಡೆ 100 ಮಂದಿ ಸಾವನ್ನಪ್ಪಿದ್ದಾರೆ. ಬಹುತೇಕ ಕೊಲೆಗಳಿಗೆ ದ್ವೇಷ ಹಾಗೂ ಹಣಕಾಸಿನ ವ್ಯವಹಾರ ಕಾರಣವಾಗಿದ್ದರೆ, ಕೆಲವು ಕೊಲೆಗಳು ವರದಕ್ಷಿಣೆ, ಕೌಟುಂಬಿಕ ಕಲಹ, ಪ್ರೀತಿ-ಪ್ರೇಮ, ಮದ್ಯದ ನಶೆಯಿಂದಲೂ ನಡೆದಿವೆ. ದ್ವೇಷ, ಪ್ರತಿಷ್ಠೆಗೂ ಕೆಲವು ರೌಡಿಗಳು ಬಲಿಯಾಗಿದ್ದಾರೆ. ಅತ್ಯಾಚಾರ ಮಾಡಿ, ಕೆಲವು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಪೂರ್ತಿ ಕಡಿವಾಣ ಮಾತ್ರ ಸಾಧ್ಯವಾಗಿಲ್ಲ.
ಐದಾರು ವರ್ಷಗಳ ಹಿಂದೆ ದಾಖಲಾದ ಬಹುತೇಕ ಕೊಲೆ ಪ್ರಕರಣಗಳ ವಿಚಾರಣೆ ಮುಗಿದು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇತ್ತೀಚೆಗಿನ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ. ರಾಜಕೀಯ ಹಿನ್ನೆಲೆಯಲ್ಲಿಯೂ ಹತ್ಯೆಗಳು ನಡೆಯುತ್ತವೆ. ಪೊಲೀಸ್ ಠಾಣೆಗಳಲ್ಲಿನ ರೌಡಿ ಪಟ್ಟಿಯಲ್ಲಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ಗೌಡ ಗೌಡರ್, ಫ್ರೂಟ್ ಇರ್ಫಾನ್, ಅಕ್ಬರ್ ಮುಲ್ಲಾ ಸೇರಿದಂತೆ ಜಿಲ್ಲೆಯಲ್ಲಿನ ಐವರು ರೌಡಿಗಳು ಸಹ ಹತ್ಯೆಯಾಗಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರ, ನಾಲ್ವರು ಬಾಲಾಪರಾಧಿಗಳ ಬಂಧನ
ರಾಜಕೀಯ, ಪ್ರತಿಷ್ಠೆ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಅವರ ಹತ್ಯೆ ನಡೆದಿದೆ. ಸಣ್ಣಪುಟ್ಟ ಕಲಹಕ್ಕೂ, ಮದ್ಯದ ಅಮಲಿನಲ್ಲಿಯೂ ಕೊಲೆ ನಡೆದು ನೆತ್ತರು ಹರಿಯುತ್ತಿದೆ. ಒಟ್ಟಿನಲ್ಲಿ ಮನರಂಜನೆ ಹೆಸರಲ್ಲಿ ಬಿತ್ತರವಾಗುವ ಮಚ್ಚು-ಲಾಂಗುಗಳ ಪ್ರಚೋದನಕಾರಿ ದೃಶ್ಯಾವಳಿ ಯುವ ಜನಾಂಗದ ಮೇಲೆ ಪ್ರಭಾವ ಬೀರುತ್ತಿವೆ. ಪಾಲಕರು, ಶಿಕ್ಷಕರು ಹಾಗೂ ಪೊಲೀಸ್ ಇಲಾಖೆ ಈ ಕುರಿತು ಜಾಗೃತಿ ಮೂಡಿಸಬೇಕಿದೆ.