ಉಡುಪಿ/ಹುಬ್ಬಳ್ಳಿ: ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಬಜೆಟ್ನಲ್ಲಿ ಯಾವುದೇ ಅನುದಾನ ಹಾಗೂ ವಿಶೇಷ ಸೌಲಭ್ಯ ಘೋಷಣೆ ಮಾಡಿಲ್ಲವೆಂದು ಉಡಪಿ ಹಾಗೂ ಹುಬ್ಬಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಕೊರೊನಾ ಬಂದಾಗ ಕೆಲಸದ ಒತ್ತಡದಿಂದ ಮೂವತ್ತೈದು ಅಂಗನವಾಡಿ ನೌಕರರು ಸಾವನ್ನಪ್ಪಿದ್ದಾರೆ. ಸಾಂಕ್ರಾಮಿಕದ ಭಯ ಇದ್ದಾಗಲೂ ಮಲೆನಾಡು ಗುಡ್ಡಗಾಡು, ಕೊಳಚೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಆಹಾರ ಸಾಮಗ್ರಿಗಳನ್ನು ಹಂಚಿದ್ದೇವೆ. ಅನೇಕ ಪ್ರಕರಣಗಳಲ್ಲಿ ಸಾರ್ವಜನಿಕರಿಂದ ಹಲ್ಲೆಗೆ ಒಳಗಾದರೂ ಎದೆಗುಂದದೆ ಕೆಲಸ ಮಾಡಿದ್ದೇವೆ. ಇಷ್ಟಾದರೂ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಉಡುಪಿಯಲ್ಲಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರದಿಂದ ಹೆಚ್ಚುವರಿ ಕೆಲಸಗಳಾದ ಬಿಪಿಎಲ್ ಕಾರ್ಡ್, ಭಾಗ್ಯಲಕ್ಷ್ಮಿ, ಮಾತೃ ವಂದನಾ, ಸ್ತ್ರೀ ಶಕ್ತಿ ಮುಂತಾದ ಕೆಲಸಗಳನ್ನು ಉಡುಪಿಯಲ್ಲಿ ಮೊಟಕುಗೊಳಿಸಲು ಸಂಘಟನೆ ನಿರ್ಧರಿಸಿದೆ ಎಂದು ಅಂಗನವಾಡಿ ನೌಕರರು ತಿಳಿಸಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಎಐಯುಟಿಸಿ ಸಂಘಟನೆ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಕೂಡಲೇ ಸರ್ಕಾರ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.