ಬೆಂಗಳೂರು/ಬೆಳಗಾವಿ/ಧಾರವಾಡ/ಬಾಗಲಕೋಟೆ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ಮುಂದುವರೆಸಿದೆ. ದಾಳಿ ವೇಳೆ, ಕೆಲ ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ನಿವೃತ್ತಿ ಅಂತಿನಲ್ಲಿದ್ದ ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಬಿ.ವೈ ಪವಾರ್ ಮನೆ, ಕಚೇರಿ ಸೇರಿ ಒಟ್ಟು ಐದು ಕಡೆ ಎಸಿಬಿ ದಾಳಿ ನಡೆದಿದೆ. ಜಕ್ಕೇರಿ ಹೊಂಡದಲ್ಲಿರುವ ಪವಾರ್ ನಿವಾಸದಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಸ್ವಂತ ಮನೆ, ಸರ್ಕಾರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೇ ನಿಪ್ಪಾಣಿಯಲ್ಲಿರುವ ಮನೆ ಹಾಗೂ ಬೋರಗಾಂವದಲ್ಲಿರುವ ಕಾರ್ಖಾನೆ ಮೇಲೂ ಪ್ರತ್ಯೇಕ ತಂಡಗಳಿಂದ ದಾಳಿ ಆಗಿದೆ. 25 ಕ್ಕೂ ಅಧಿಕ ಸಿಬ್ಬಂದಿಯಿಂದ ಬೆಳಂಬೆಳಗ್ಗೆ ಕಾರ್ಯಾಚರಣೆ ನಡೆದಿದೆ. ಬಿ.ವೈ. ಪವಾರ್ ಜೂನ್ 30 ರಂದು ಸೇವಾ ನಿವೃತ್ತಿ ಹೊಂದಲಿದ್ದರು.
ಬಾಗಲಕೋಟೆ ಆರ್‌ಟಿಒ ಯಲ್ಲಪ್ಪ ಪಡಸಾಲಿ ಅವರಿಗೆ ಸಂಬಂಧಿಸಿದ 7 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಕೊಪ್ಪಳದಲ್ಲಿ 4 ಕಡೆ, ಬಾಗಲಕೋಟೆಯಲ್ಲಿ 2 ಕಡೆ ದಾಳಿ ಮಾಡಲಾಗಿದೆ. ಧಾರವಾಡದ ಲಕಮನಹಳ್ಳಿ ಕೆಎಚ್‌ಬಿ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ಒಟ್ಟು 16 ಲಕ್ಷ ರೂ ನಗದು, 250 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅಧಿಕಾರಿಯ ಕಾರು ಸೇರಿದಂತೆ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ. ಹಾಗೆಯೇ ಬಾಗಲಕೋಟೆ ಸೆಕ್ಟರ್ 58 ರಲ್ಲಿರುವ ಮನೆ ಮೇಲೂ ದಾಳಿ ನಡೆದಿದೆ.
ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶಂಕರಲಿಂಗ ಗೂಗಿ ಅವರ ಬಾಗಲಕೋಟೆ ನವನಗರದ 55ನೇ ಸೆಕ್ಟರ್ನಲ್ಲಿರುವ ಅವರ ಮನೆ, ವಿದ್ಯಾಗಿರಿಯ ನಿರ್ಮಿತಿ ಕೇಂದ್ರದ ಕಚೇರಿ ಮೇಲೂ ದಾಳಿ ಮಾಡಿ ಕಾಗದ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಶಂಕರಲಿಂಗ ಅಸೋಸಿಯೇಟ್ ದೇಸಾಯಿ, ಹಿರೇಮಠ ಅವರ ಮನೆ, ಧಾರವಾಡದಲ್ಲಿರುವ ಗಣೇಶ ಎಂಬುವವರ ಮನೆ ಮೇಲೂ ದಾಳಿ ಮಾಡಿದ್ದಾರೆ. ಸದ್ಯ ಗೂಗಿ ಅವರ ಮನೆಯಲ್ಲಿ 1 ಲಕ್ಷ 15 ಸಾವಿರ ರೂ. ನಗದು ಹಣ ಪತ್ತೆ ಆಗಿದೆ ಎಂದು ತಿಳಿದುಬಂದಿದೆ.
(ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ : ರಾಜ್ಯದ 80 ಕಡೆ 21 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ)