ಹುಬ್ಬಳ್ಳಿ: ನಗರದ ಬಿಆರ್ಟಿಎಸ್ ಬಸ್ ನಿಲ್ದಾಣದಲ್ಲಿನ ಅವೈಜ್ಞಾನಿಕ ಅಂಡರ್ ಪಾಸ್ ಪಾದಚಾರಿ ಕಾಮಗಾರಿ ಖಂಡಿಸಿ ಎಎಪಿ ಪಕ್ಷದಿಂದ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಬೈರಿದೇವರಕೊಪ್ಪದ ಸನಾ ಕಾಲೇಜು ಪಕ್ಕದ ಬಿಆರ್ಟಿಎಸ್ ಅಂಡರ್ ಪಾಸ್ ಸಂಪೂರ್ಣ ಹದಗೆಟ್ಟು ಹೋಗಿದ್ದು, ಇದರಿಂದಾಗಿ ಜನರು ಭಯದಿಂದ ರಸ್ತೆ ದಾಟುವಂತಾಗಿದೆ ಎಂದು ಆರೋಪಿಸಿದರು.
ಬಿಆರ್ಟಿಎಸ್ ಬಸ್ ನಿಲ್ದಾಣದಿಂದ ಬಸ್ ಇಳಿದು ಅಂಡರ್ ಪಾಸ್ ಮೂಲಕ ರಸ್ತೆ ದಾಟಲು ಇರುವ ಏಕೈಕ ದಾರಿ ಇದಾಗಿದ್ದು, ಇದರಲ್ಲಿ ನೀರು ನಿಂತು ಕೆರೆಯಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಂಡರ್ ಪಾಸ್ ಸ್ವಚ್ಛಗೊಳಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಜನ ಸ್ನೇಹಿಯಾಗಬೇಕಿದ್ದ ಅಂಡರ್ ಪಾಸ್ ಪಾದಚಾರಿ ಜನ ವಿರೋಧಿಯಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು ಹಾಗೂ ಶಾಸಕರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಎಎಪಿ ಕಾರ್ಯಕರ್ತರು ಆಗ್ರಹಿಸಿದರು.