ದಾವಣಗೆರೆ: ಫೋನ್ ಕದ್ದಾಲಿಕೆ ಮಾಡಿ ಸರ್ಕಾರ ಉಳಿಸಿಕೊಳ್ಳುವ ಅಗತ್ಯತೆ ನಮಗೆ ಇರಲಿಲ್ಲ, ಬಿಜೆಪಿ ಶಾಸಕರನ್ನು ಖರೀದಿ ಮಾಡಿದ್ದರೆ ಸಾಕಿತ್ತು. ಆದರೆ ಈ ಹೀನ ಕೃತ್ಯಕ್ಕೆ ನಾವು ಇಳಿಯಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಶರವಣ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಆರೋಪ ಸುಳ್ಳು, ನಮಗೆ ಆ ಅಗತ್ಯತೆ ಇರಲಿಲ್ಲ, ಈ ಕೆಟ್ಟ ಕೆಲಸಕ್ಕೆ ನಾವು ಇಳಿದಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ 25 ದಿನ ಆಗಿದ್ದರೂ ಕ್ಯಾಬಿನೆಟ್ ರಚನೆಯಾಗಿಲ್ಲ. ಉತ್ತರ ಕರ್ನಾಟಕದ ಮಂದಿ ನೆರೆಯಿಂದ ತತ್ತರಿಸಿದ್ದಾರೆ. ಪ್ರಧಾನಿಗಳು ಈ ಬಗ್ಗೆ ಚಕಾರ ಎತ್ತಿಲ್ಲ, ಕೇಂದ್ರ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು.
ಇನ್ನು ಪರಿಹಾರ ನೀಡಲು ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದು ಬಿಎಸ್ವೈ ಹೇಳಿದ್ದಾರೆ. ಇದು ಸರಿಯಿಲ್ಲ, ಸಂಸದರ ಕಿವಿ ಹಿಂಡಿ ಪರಿಹಾರ ತನ್ನಿ, ಹಳ್ಳಿಗಳಲ್ಲಿ 10 ಕೋಟಿ ಕೊಟ್ಟರೆ ಅವರ ಹೆಸರನ್ನು ಆ ಗ್ರಾಮಕ್ಕೆ ಇಡುವುದಾಗಿ ಸರ್ಕಾರ ಹೇಳಿದೆ. ಹಳ್ಳಿಗಳಿಗೆ ಅದರದ್ದೇ ಆದ ಪರಂಪರೆ ಇರುತ್ತೆ, ಹಣ ಕೊಟ್ಟ ಕೂಡಲೇ ಅವರ ಹೆಸರು ಇಡುವುದು ಸರಿಯಾದ ಕ್ರಮವಲ್ಲ. ಪರಂಪರೆಗಳನ್ನು ಮಾರಾಟ ಮಾಡಿ ತುಘಲಕ್ ದರ್ಬಾರ್ ಮಾಡಲು ಸರ್ಕಾರ ಹೊರಟಿದೆ. ನೆರವು ನೀಡಲು ನಾವು ಸಿದ್ದರಿದ್ದು, ಈ ರೀತಿಯ ಕ್ರಮ ಸರ್ಕಾರ ಕೈಬಿಡಲಿ ಎಂದು ಗುಡುಗಿದರು.