ದಾವಣಗೆರೆ: ಇತ್ತೀಚಿನ ದಿನಗಳಲ್ಲಿ 'ಡ್ರ್ಯಾಗನ್ ಫ್ರೂಟ್' ಕೃಷಿ ಹೆಸರು ವಾಸಿಯಾಗುತ್ತಿದ್ದು, ವಿದ್ಯಾವಂತ ಯುವಕರು ಕೂಡಾ ವ್ಯವಸಾಯದತ್ತ ಮುಖಮಾಡಿ ವಿದೇಶಿ ಬೆಳೆ ಬೆಳೆದು ಯಶಸ್ಸು ಕಾಣುತ್ತಿದ್ದಾರೆ. ತಾಲೂಕಿನ ಸಿದ್ದನೂರು ಗ್ರಾಮದ ರೈತ ಮಲ್ಲಿಕಾರ್ಜುನ ಬಿಬಿಎಂ ವ್ಯಾಸಂಗ ಮಾಡಿ ಖಾಸಗಿ ಕಂಪನಿಗಳ ಕಚೇರಿಗೆ ಉದ್ಯೋಗಕ್ಕಾಗಿ ಅಲೆದಾಡದೇ ಕೃಷಿಯತ್ತ ಮುಖಮಾಡಿ ಇಂದು ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ.
ಕಾಂಕ್ರೀಟ್ ಕಾಡಿನಲ್ಲಿ ಖಾಸಗಿ ಕಂಪನಿಗಳ ಕೆಲಸದ ಗೋಜಿಗೆ ಹೋಗದ ಮಲ್ಲಿಕಾರ್ಜುನ್, ಕಳೆದೆರಡು ವರ್ಷದ ಹಿಂದೆ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯಲು ಮುಂದಾಗಿ ಸಸ್ಯಗಳನ್ನು ನಾಟಿದ್ದ. ಕಲ್ಲಿನ ಕಂಬ, ಅದರ ಮೇಲೆ ಟೈರ್ ಅಳವಡಿಸಿ ಸಸ್ಯ ಬೆಳೆಯಲು ಆಧಾರ ನೀಡಿದ್ದಾರೆ. ಅಲ್ಲದೆ ಕ್ಲಾಂಪಿಂಗ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಂದು ಗಿಡಕ್ಕೆ 600ಕ್ಕೂ ಅಧಿಕ ವೆಚ್ಚ ಮಾಡಿರುವ ರೈತ ಎಕರೆಗೆ 380 ಗಿಡಗಳನ್ನು ಬೆಳೆಸಿದ್ದಾರೆ.
ಎಕರೆಗೆ ಸುಮಾರು 2.80 ಲಕ್ಷ ವೆಚ್ಚ ಮಾಡಿರುವ ರೈತ ಕ್ಯಾಕ್ಟಸ್‌ಗೆ ಸೇರಿದ ಸಸ್ಯವನ್ನು ಬೆಳೆಸಿದ್ದಾರೆ. ಇದರ ವಿಶೇಷತೆ ಅಂದ್ರೆ ಇದಕ್ಕೆ ಸಾವೇ ಇಲ್ಲ. ಗಿಡ ನೆಡುವಾಗ ಮಾತ್ರ ಹೆಚ್ಚು ಖರ್ಚಾಗುತ್ತದೆ. ಬಳಿಕ ಪ್ರತಿ ವರ್ಷ ಎಕರೆಗೆ ಹೆಚ್ಚೆಂದರೆ 15 ಸಾವಿರ ವೆಚ್ಚವಾಗಬಹುದು. ನಿರಂತರ 20 ವರ್ಷ ಆದಾಯ ಬರುತ್ತದೆ. ಬಳಿಕವೂ ಗಿಡ ಇರುತ್ತದೆ. ಆದರೆ ಹಣ್ಣು ಬಿಡುವುದು ಕಡಿಮೆ. ಸದ್ಯ ಬೆಂಗಳೂರು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ದೊಡ್ಡ ನಗರಗಳಿಗೆ ರೈತ ಮಲ್ಲಿಕಾರ್ಜುನ್ ಬೆಳೆದ ಹಣ್ಣನ್ನು ರಫ್ತು ಮಾಡುತ್ತಿದ್ದಾನೆ.
ಈ ಹಿಂದೆ ದಾಳಿಂಬೆ ಬೆಳೆಯುವ ಸಮಯದಲ್ಲಿ ಸಲಹೆ ನೀಡಿದ್ದ ಡಾ. ಸುನಿಲ್ ಅವರು ಡ್ರ್ಯಾಗನ್ ಫ್ರೂಟ್ಸ್ ಬೆಳೆಯಲು ಸಲಹೆ ನೀಡಿದರು. ಬಳಿಕ ಆನಗೋಡು ಹೋಬಳಿಯ ಸಹಾಯಕ ತೋಟಗಾರಿಕಾ ಅಧಿಕಾರಿ ರವಿ ಪ್ರೋತ್ಸಾಹ ನೀಡಿದರು. ಈ ಬೆಳೆಯ ಬಗ್ಗೆ ಯುಟ್ಯೂಬ್ನಲ್ಲಿ ನೋಡಿದ್ದೆ. ಗಿಡ ನೆಟ್ಟು 8 ತಿಂಗಳಿಗೆ ಮೊದಲ ಬೆಳೆ ದೊರೆತಿದ್ದು, ಎರಡನೇ ವರ್ಷದಿಂದ ಉತ್ತಮ ಬೆಳೆ ಬರಲು ಶುರುವಾಗಿದೆ. ಮೊದಲು ಒಂದು ಗಿಡಕ್ಕೆ 10 ಕೆ.ಜಿ.ಯಂತೆ ಫಲ ಸಿಗುತ್ತಿತ್ತು. ಆನಂತರ ವರ್ಷದಿಂದ ಪ್ರತಿ ಗಿಡ ಮೂರು ಪಟ್ಟು ಅಂದರೆ ಒಂದು ಗಿಡಕ್ಕೆ 30 ಕೆ.ಜಿ.ಯಂತೆ ಫಲ ಬರತೊಡಗಿದೆ. ಕೆಜಿಗೆ ನೂರರಿಂದ ಇನ್ನೂರು ವರೆಗೆ ದರ ಸಿಗುತ್ತದೆ. ಮುಕ್ಕಾಲು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಹತ್ತರಿಂದ 15 ಲಕ್ಷ ಆದಾಯ ದೊರೆಯುತ್ತದೆ ಅಂತಾರೆ ರೈತ ಮಲ್ಲಿಕಾರ್ಜುನ ಅವರು.
ಒಟ್ಟಾರೆಯಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಈ ಬೆಳೆ ನೀರಿನ ಅಭಾವ ವಿರುವ ಪ್ರದೇಶದ ಜನರಿಗೆ ಬಂಗಾರದ ಬೆಳೆಯಾಗಿದೆ ಪರಿಣಮಿಸಿದೆ. ಇತ್ತ ವಿದ್ಯಾವಂತರಾಗಿರುವ ಮಲ್ಲಿಕಾರ್ಜುನ ಅವರು ಕೃಷಿ ನಂಬಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ಮೂಲಕ ವ್ಯವಸಾಯದ ಮೌಲ್ಯ ತಿಳಿಸಿದ್ದಾರೆ.