ದಾವಣಗೆರೆ: ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ಹಾಲಿ ಹಾಗೂ ಮಾಜಿ ಸಿಎಂಗಳು ಮುಖಾಮುಖಿಯಾಗದ ಘಟನೆಗೆ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಜಾತ್ರೆ ಸಾಕ್ಷಿಯಾಗಿದೆ.
ಬೆಳಿಗ್ಗೆ 11.30ಕ್ಕೆ ಸಿಎಂ ಯಡಿಯೂರಪ್ಪ ಹೆಲಿಕಾಪ್ಟರ್ ಮೂಲಕ ಶಿಕಾರಿಪುರದಿಂದ ರಾಜನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ ಎಂದು ಪ್ರವಾಸ ಪಟ್ಟಿ ನಿಗದಿಯಾಗಿತ್ತು. ಆದ್ರೆ, ಯಡಿಯೂರಪ್ಪರಿಗಿಂತ ಮುಂಚೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದರು. ಸಮಯ ಸುಮಾರು 11.30ಕ್ಕೆ ಆಗಮಿಸಿದ ಸಿದ್ದರಾಮಯ್ಯನವರು ಮಾಧ್ಯಮದವರ ಜೊತೆ ಮಾತನಾಡದೇ ಸೀದಾ ಮಠಕ್ಕೆ ತೆರಳಿ ಬಳಿಕ ಅಲ್ಲಿಂದ ವೇದಿಕೆಗೆ ಆಗಮಿಸಿದರು.
ಸಿದ್ದರಾಮಯ್ಯ ಮಾತನಾಡುವಾಗ ಯಡಿಯೂರಪ್ಪ ಅವರು ಆಗಮಿಸುತ್ತಿದ್ದ ಹೆಲಿಕಾಪ್ಟರ್ ಹಾರಾಟದ ಶಬ್ಧ ಕೇಳಿ ಕೂಡಲೇ ಭಾಷಣ ಮುಗಿಸಿ ತರಾತುರಿಯಲ್ಲಿ ಅಲ್ಲಿಂದ ಹೊರಟರು. ಯಡಿಯೂರಪ್ಪ ಸಹ ಜಾಣ ನಡೆ ಅನುಸರಿಸಿ, ಹೆಲಿಕಾಪ್ಟರ್‌ನಿಂದ ಬಂದು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ ಸಿದ್ದರಾಮಯ್ಯ ವೇದಿಕೆಯಿಂದ ಇಳಿದು ಹೋದ ಮೇಲೆ ವೇದಿಕೆ ಹತ್ತಿದರು.
ನಂತರ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರು ಜಾತ್ರೆಗೆ ಆಗಮಿಸಿ ವೇದಿಕೆ ಹತ್ತಿರ ಬರುತ್ತಿದ್ದಂತೆ, ಭಾಷಣ ಮುಗಿಸಿದ ಬಿಎಸ್ವೈ ಹೆಚ್ಡಿಕೆಯವರನ್ನು ಭೇಟಿಯಾಗದೆ ಅಲ್ಲಿಂದ ತೆರಳಿದರು. ಅಚಾತುರ್ಯವೋ ಅಥವಾ ವೈಮನನ್ಸೋ ಗೊತ್ತಿಲ್ಲ, ಸಿಎಂ ಹಾಗೂ ಮಾಜಿ ಸಿಎಂಗಳು ಮುಖಾಮುಖಿಯಾಗದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತ್ರ ವಿಶೇಷ.