ದಾವಣಗೆರೆ: ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ. ಮಂಜಪ್ಪರಿಗೆ ಬೆಂಬಲಿಸುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದೆ.
ಲೋಕಸಭೆ ಚುನಾವಣೆಗೆ ಹಿನ್ನೆಲೆ ಪಂಚಮಸಾಲಿ ಸಮಾಜದ ಯಾರಿಗೆ ಬೆಂಬಲ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಇದಕ್ಕಾಗಿಯೇ ಮೊನ್ನೆ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಸಮಾಜದ ಸಮಾನ ಮನಸ್ಕರರ ಸಭೆ ಕರೆದು ಚರ್ಚೆ ನಡೆಸಿದ್ದರು. ಅಂತಿಮವಾಗಿ ಬಿಜೆಪಿಗೆ ಕೈಕೊಟ್ಟು, ಕಾಂಗ್ರೆಸ್ ಕೈ ಹಿಡಿಯಲು ಸಮಾಜದ ಮುಖಂಡರು ನಿರ್ಧರಿಸಿದ್ದಾರೆ.
ಸಭೆ ವೇಳೆ ಸಮಾಜದ ಮುಖಂಡರು,ಬಿಜೆಪಿ ವಿರುದ್ದ ಕಿಡಿಕಾರಿದ್ದರು. ಬಿಜೆಪಿಯಲ್ಲಿ ನಮ್ಮನ್ನು ಹತ್ತು ವರ್ಷ ದುಡಿಸಿಕೊಂಡರೂ ಗೌರವ ಕೊಡಲಿಲ್ಲ ಎಂದು ಮುಖಂಡ ಹೆಚ್.ಎಸ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸಮುದಾಯದ ಕೊಟ್ರೇಶ್ಗೆ ಹರಪನಹಳ್ಳಿಯಿಂದ ಟಿಕೆಟ್ ಕೊಡುವುದಾಗಿ ಹೇಳಿದ್ದ ಬಿಜೆಪಿಯ ಸಿದ್ದೇಶ್ವರ, ಆನಂತರ ಕೈಕೊಟ್ಟಿದ್ದರು. ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೇ ಕಾರಣಕ್ಕೆ ಮುಖಂಡರಾದ ತೇಜಸ್ವಿ ಪಟೇಲ್, ಹೆಚ್.ಎಸ್ ನಾಗರಾಜ್, ಕೊಟ್ರೇಶ್ ಹಾಗೂ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ ಮಂಜಪ್ಪರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ದಾವಣಗೆರೆಯಲ್ಲಿ ಮಾಹಿತಿ ನೀಡಿದ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್, ಬಿಜೆಪಿಯಲ್ಲಿ ದುಡಿದವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಕೊಟ್ರೇಶ್ ಜೆಡಿಎಸ್ಗೆ ಬಂದ್ರು. ಮುರುಗೇಶ್ ನಿರಾಣಿಯವರು ಪಂಚಮಸಾಲಿ ಮತ ಸೆಳೆಯಲು ದಾವಣಗೆರೆಯಲ್ಲಿ ಟಿಕಾಣಿ ಹೂಡಿದ್ದಾರೆ. ಆದರೆ, ಸಮಾಜದ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬೀಳಲಿವೆ ಎಂದು ಸ್ಪಷ್ಟನೆ ನೀಡಿದರು.
ಕುರಿ ಹೋರಿಯಾಗಿದೆ :
ಮೊದಲು ಗೂಳಿ ಮುಂದೆ ಕುರಿ ನಿಂತಿದೆ ಎಂದು ಮಂಜಪ್ಪರಿಗೆ ನಾನೇ ಹೇಳಿದ್ದೆ. ಆದರೆ, ಈಗ ಜೆಡಿಎಸ್ನವರು ಬೆಂಬಲ ಕೊಟ್ಟ ಮೇಲೆ ಕುರಿ ಹೋರಿಯಾಗಿ ಮುನ್ನುಗುತ್ತಿದೆ, ಮಂಜಪ್ಪ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.