ದಾವಣಗೆರೆ: ಸರ್ಕಾರದ ಪ್ರತಿ ಯೋಜನೆಗಳನ್ನು ಎಲ್ಲ ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು. ಗ್ರಾಮೀಣ ಜನರಿಂದ ಒಂದೂ ದೂರು ಬಾರದಂತೆ ಪಶು ವೈದ್ಯರು ಸೇರಿದಂತೆ ಎಲ್ಲ ಪಶುಸಂಗೋಪನೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಶುಸಂಗೋಪನೆ ಮತ್ತು ವಕ್ಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಗೋಮಾತೆ ನನ್ನ ಮಾತೆ. ಗೋವನ್ನು ರಕ್ಷಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿ. ಗೋ ಶಾಲೆಗಳನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕು. ಸರ್ಕಾರ ಗೋಶಾಲೆಗಳಿಗೆ ಅನುದಾನ ನೀಡುತ್ತಿದ್ದು, ಇನ್ನೇನಾದರೂ ಸೌಲಭ್ಯ ಬೇಕಿದ್ದಲ್ಲಿ ಅಧಿಕಾರಿಗಳು ಕೇಳಬೇಕು. ಜೊತೆಗೆ ಗೋಶಾಲೆಗಳ ಬಗ್ಗೆ ನಿಗಾ ವಹಿಸಬೇಕು. ಕಸಾಯಿಖಾನೆಗಳಿಗೆ ಹೋಗದಂತೆ ಗೋವುಗಳನ್ನು ರಕ್ಷಿಸುವಲ್ಲಿ ಕ್ರಮ ವಹಿಸಬೇಕು ಎಂದರು.
ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯ ಉಪನಿರ್ದೇಶಕರು ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಬೇಕು. ನಾನೂ ಅನೇಕ ಕಡೆ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತೇನೆ. ಲೋಪ ಕಂಡು ಬಂದರೆ ಅಧಿಕಾರಿಗಳನ್ನು ವಜಾಗೊಳಿಸಲು ಹಿಂಜರಿಯುವುದಿಲ್ಲ. ಅದೇ ರೀತಿಯಲ್ಲಿ ಉಪನಿರ್ದೇಶಕರು ತಾಲೂಕುಗಳಿಗೆ ಭೇಟಿ ನೀಡಿ ಕ್ರಮ ವಹಿಸಬೇಕು. ತಾಲೂಕು ಸಹಾಯಕ ನಿರ್ದೇಶಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಭೇಟಿ ನೀಡಬೇಕು ಎಂದು ಸೂಚಿಸಿದರು.
ಪಶುವೈದ್ಯರು ಆಸ್ಪತ್ರೆಗಳು, ಹಳ್ಳಿಗಳಿಗೆ ಬರುತ್ತಿಲ್ಲ ಎಂದು ಗ್ರಾಮಸ್ಥರಿಂದ ನನಗೇ ಖುದ್ದು ಅನೇಕ ಕರೆಗಳು ಬಂದಿವೆ. ಈ ರೀತಿ ಮುಂದೆ ಆಗದಂತೆ ಕ್ರಮ ಕೈಗೊಳ್ಳಬೇಕು. ವೈದ್ಯರ ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಆದಷ್ಟು ಬೇಗ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್ ನಾಯಕ್ ಮಾತನಾಡಿ, ಮಾರ್ಚ್ 16 ರಿಂದ ಏಪ್ರಿಲ್ 30ರವರೆಗೆ ಹರಿಹರ ತಾಲೂಕಿನಲ್ಲಿ ಕೋಳಿಜ್ವರ ಬಂದಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಅವಧಿಯಲ್ಲಿ ಕೋಳಿಗಳ ಆಹಾರ ಕೊರತೆ ಎದುರಾಗಿತ್ತು. ಲಾಕ್‍ಡೌನ್ ವೇಳೆ 30 ದಿನಗಳ ಕಾಲ ಸುಮಾರು 50 ಸಾವಿರ ಲೀಟರ್ ಹಾಲನ್ನು ಬಡವರಿಗೆ, ವಲಸೆ ಕಾರ್ಮಿಕರಿಗೆ ಉಚಿತವಾಗಿ ಕೆಎಂಎಫ್ ವತಿಯಿಂದ ನೀಡಲಾಗಿದೆ. ಇಲಾಖೆ ವತಿಯಿಂದ ರೂ.3 ಲಕ್ಷ ಮೊತ್ತದ 300 ಆಹಾರದ ಕಿಟ್‍ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದರು.
ಭಗವಾನ್ ಮಹಾವೀರ ಗೋಶಾಲೆಗೆ ಸಚಿವ ಭೇಟಿ
ಭಗವಾನ್ ಮಹಾವೀರ ಗೋಶಾಲೆಗೆ ಪ್ರಭು ಚವಾಣ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಅತ್ಯಂತ ಚೊಕ್ಕ ರೀತಿಯಲ್ಲಿ ಗೋಶಾಲೆ ನಿರ್ವಹಣೆ ನಡೆಯುತ್ತಿದ್ದು, ಸುಮಾರು 500ಕ್ಕೂ ಹೆಚ್ಚು ಗೋವುಗಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಕಸಾಯಿ ಖಾನೆಗೆ ಸಾಗಿಸುತ್ತಿದ್ದು ಅದೆಷ್ಟೋ ಗೋವುಗಳಿಗೆ ಭಗವಾನ್ ಮಹಾವೀರ ಗೋಶಾಲೆ ಮರು ಜೀವ ನೀಡಿದೆ. ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳನ್ನು ಇಲ್ಲಿ ಆಚರಿಸಿಕೊಳ್ಳಲು ಅವಕಾಶವಿದೆ. ಗೋಮಾತೆಗೆ ಇಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವುದನ್ನು ಕಂಡು ಸಂತೋಷವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.