ದಾವಣಗೆರೆ: ರಾಗಿ ಮಾರಾಟ ನೋಂದಣಿಗೆ ಮಾರ್ಚ್ 31ರವರೆಗೂ ಸಮಯಾವಕಾಶವಿದ್ದರೂ ದಾವಣಗೆರೆ ಜಿಲ್ಲೆಯ ಖರೀದಿ ಕೇಂದ್ರದಲ್ಲಿ ಮಾತ್ರ ರೈತರ ನೋಂದಣಿಯನ್ನು ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರಾಗಿ ಮಾರಾಟ ಮಾಡಲು ಮುಂದಾಗಿದ್ದ ರೈತರಿಗೆ ಇದು ಆಘಾತವನ್ನುಂಟು ಮಾಡಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ 300 ಅಧಿಕ ರೈತರು ರಾಗಿ ಬೆಳೆದಿದ್ದಾರೆ. ಎಪಿಎಂಸಿಯಲ್ಲಿ ಸರ್ಕಾರದ ಬೆಂಬಲ ಬೆಲೆಯಡಿ ಖರೀದಿ ಕೇಂದ್ರದ ಅಧಿಕಾರಿಗಳು ರೈತರ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗ್ತಿದೆ. ರೈತರು ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಮಾತ್ರ ನಮಗೆ ಸರ್ಕಾರದಿಂದ ನೋಂದಣಿ ಮಾಡಿಕೊಳ್ಳಲು ಯಾವುದೇ ಮಾಹಿತಿ ನೀಡಿಲ್ಲ ಎಂದು ಉತ್ತರಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಫ್ರೂಟ್ ಐಡಿಯಲ್ಲಿ ಚನ್ನಗಿರಿ ತಾಲೂಕಿನ 20 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ತಾಲೂಕಿನಲ್ಲಿ 500ಕ್ಕೂ ಅಧಿಕ ರೈತರು ಕ್ವಿಂಟಲ್ಗಟ್ಟಲೇ ರಾಗಿ ಬೆಳೆದಿದ್ದಾರೆ. ಅದರಲ್ಲಿ 300 ರೈತರು ಸರ್ಕಾರಕ್ಕೆ ರಾಗಿಯನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ. ಈ ಪೈಕಿ ಕೇವಲ 20 ರೈತರನ್ನು ಮಾತ್ರ ನೋಂದಣಿ ಮಾಡಿಕೊಳ್ಳಲಾಗಿದೆ. ಉಳಿದ ರೈತರ ರಾಗಿ ಖರೀದಿಗೆ ಮುಂದಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಓದಿ: ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ದಿನಕ್ಕೊಂದು ಶೋ ಮಾಡ್ತಾರೆ : ಸಚಿವ ಆರ್ ಅಶೋಕ್ ಟೀಕೆ
ರಾಗಿ ಖರೀದಿ ಕೇಂದ್ರದಲ್ಲಿ ಖರೀದಿ ಹಾಗೂ ನೋಂದಣಿಗೆ ಮಾರ್ಚ್ 31 ರ ತನಕ ಸರ್ಕಾರ ಅವಕಾಶ ಕಲ್ಪಿಸಿದೆ. ಇದೀಗ ಜನವರಿ ತಿಂಗಳಲ್ಲೇ ರಾಗಿ ಖರೀದಿಯನ್ನು ಸ್ಥಗಿತಗೊಳಿಸಿರುವುದು ರೈತ ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಒಂದು ಕ್ವಿಂಟಲ್ ರಾಗಿಗೆ 3,378 ರೂಪಾಯಿ ಬೆಂಬಲ ಬೆಲೆ ಘೋಷಿಸಿದೆ.
ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿಯನ್ನು ಆರಂಭಿಸುವಂತೆ ರೈತರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರ ಗಮನಕ್ಕೆ ತಂದಿದ್ದು, ಸಚಿವರು ಕೂಡ ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದೇನೆ. ನೋಂದಣಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ