ದಾವಣಗೆರೆ: ಐಎಎಸ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ನಗರದಲ್ಲಿ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತೇನೆ ಎಂದಿದ್ದ ವೈದ್ಯ ಎಂ. ಹೆಚ್. ರವೀಂದ್ರನಾಥ್ ಅವರಿಗೆ ರಾಜ್ಯ ಸರ್ಕಾರ ಸ್ಥಳ ನೀಡಿ ನಿಯುಕ್ತಿಗೊಳಿಸಿದೆ. ಕೊಪ್ಪಳ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯಾಗಿ ಅವರನ್ನು ವರ್ಗಾವಣೆ ಮಾಡಿದೆ.
"ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ'' ಎಂದು ಆಟೋ ಮೇಲೆ ಬರೆಸಿಕೊಂಡು ಚಾಲನೆ ಮಾಡುತ್ತಿದ್ದ ರವೀಂದ್ರನಾಥ್ ಅವರಿಗೆ ಐಎಂಎ ಕೂಡ ಬೆಂಬಲ ನೀಡಿತ್ತು. ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ನನ್ನ ಪರ ತೀರ್ಪು ನೀಡಿದ್ದರೂ ಹುದ್ದೆ ತೋರಿಸದ ಕಾರಣಕ್ಕೆ ರವೀಂದ್ರನಾಥ್ ಅಸಮಾಧಾನಗೊಂಡು ಆಟೋ ಓಡಿಸಿ ಜೀವನ ಸಾಗಿಸುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದರು.
ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಲಸಿಕಾಧಿಕಾರಿ ಆಗಿದ್ದ ವೇಳೆ ಟೆಂಡರ್ ಟೆಕ್ನಿಕಲ್ ಬಿಡ್ ಇವಾಲ್ಯುಯೇಷನ್ ಸಂಬಂಧ ಸಮರ್ಪಕ ದಾಖಲೆ ನೀಡಿಲ್ಲ ಎಂಬ ಕಾರಣಕ್ಕೆ ರವೀಂದ್ರನಾಥ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಜಿಲ್ಲಾಮಟ್ಟದ ಹುದ್ದೆ ನೀಡಬೇಕೆಂದು ಕೆಎಟಿಗೆ ಎರಡು ಬಾರಿ ಮೊರೆ ಹೋಗಿದ್ದಾಗ ಇವರ ಪರವೇ ತೀರ್ಪು ಬಂದಿತ್ತು. ಆದರೆ ಈಗ ಸರ್ಕಾರ ಕೊಪ್ಪಳಕ್ಕೆ ವರ್ಗಾವಣೆ ಮಾಡಿದ್ದು, ಎರಡು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ.
"ಇನ್ನೆರಡು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತೇನೆ, ಸತ್ಯಕ್ಕೆ ಸಂದ ಜಯ ಇದು. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಇದನ್ನು ಮುಂದುವರಿಸುತ್ತೇನೆ. ಬಡವರ ಪರವಾಗಿ ದುಡಿಯುತ್ತೇನೆ, ಸರ್ಕಾರದ ಕಣ್ಣು ತೆರೆಸಿದ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸುತ್ತೇನೆ'' ಎಂದು ಡಾ. ರವೀಂದ್ರನಾಥ್ "ಈಟಿವಿ ಭಾರತ''ಕ್ಕೆ ತಿಳಿಸಿದ್ದಾರೆ.