ದಾವಣಗೆರೆ: ಮಹಾನಗರ ಪಾಲಿಕೆಯ ಇಂಜಿನಿಯರ್ಗಳು ಮಾಡಿರುವ ಎಡವಟ್ಟಿಗೆ ಫುಟ್ಪಾತ್ ವ್ಯಾಪಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಿದ್ದ ಫುಟ್ಪಾತ್ ಅನ್ನು, ಮತ್ತೆ ತೆರವುಗೊಳಿಸಿ ಅದೇ ಜಾಗದಲ್ಲಿ ಮತ್ತೆ ಫುಟ್ ಪಾತ್ ಮಾಡಲು ಹೊರಟಿರುವ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬೀದಿ ವ್ಯಾಪಾರಿಗಳಂತೂ ಈ ನಿರ್ಧಾರಕ್ಕೆ ಗರಂ ಆಗಿದ್ದಾರೆ.
ಸ್ಮಾರ್ಟ್ ಸಿಟಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು. ಈ ಯೋಜನೆಗೆ ಆಯ್ಕೆಯಾಗಿರುವ ಬೆಣ್ಣೆನಗರಿಯಲ್ಲಿ ಒಂದಲ್ಲ ಒಂದು ಕಳಪೆ
ಕಾಮಗಾರಿ ಬೆಳಕಿಗೆ ಬರುತ್ತಲೇ ಇದೆ. ಇದಕ್ಕೆ ಮತ್ತೊಂದು ಸೇರ್ಪಡೆ ರಾಮ್ ಅಂಡ್ ಕೋ ಸರ್ಕಲ್ ನಲ್ಲಿನ ಫುಟ್ಪಾತ್. ಇಲ್ಲಿ ನೂರಾರು ವ್ಯಾಪಾರಿಗಳು ವ್ಯಾಪಾರ ಮಾಡುತ್ತಾ ಜೀವನ ಕಂಡು ಕೊಂಡಿದ್ದರು. ಈ ಹಿಂದೆ, ಇಲ್ಲಿಯೇ ಮಹಾನಗರ ಪಾಲಿಕೆಯಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಫುಟ್ ಪಾತ್ ನಿರ್ಮಾಣ ಮಾಡಲಾಗಿತ್ತು.
ಜನರ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಿರ್ಮಿಸಿದ್ದರೂ ಪ್ರಯೋಜನ ಆಗಿದ್ದು ಮಾತ್ರ ಶೂನ್ಯ. ಈಗ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಪಾಲಿಕೆ ಮೇಯರ್ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಜನರು ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ. ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ ಪದೇ ಪದೆ ದೂರು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮೇಯರ್ ಅಜಯ್ ಕುಮಾರ್, ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ, ಫುಟ್ಪಾತ್ ನಿರ್ಮಾಣ ಮಾಡುವಾಗ ಅಧಿಕಾರಿಗಳು ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. ನಿರ್ಮಾಣ ಮಾಡಿದ್ದ ಫುಟ್ಪಾತ್ ಮತ್ತೆ ನಿರ್ಮಾಣ ಮಾಡಲು ಹೊರಟಿರುವುದರಿಂದ ವ್ಯಾಪಾರಸ್ಥರ ನಿದ್ದೆ ಕೆಡಿಸಿದೆ. ತಪ್ಪು ಎಸಗಿದ ಇಂಜಿನಿಯರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೇಯರ್ ವಾರ್ನಿಂಗ್ ನೀಡಿದ್ದಾರೆ.
ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಜನನಿಬಿಡ ಸಂಚಾರ ಇರುತ್ತದೆ. ಇಲ್ಲೇ ಇರುವ ಮರಗಳನ್ನು ಕಡಿಯುವ ಸಂಬಂಧ ಜನರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬ ನಿರ್ಧಾರಕ್ಕೆ ಪಾಲಿಕೆ ಬಂದಿದೆ.