ದಾವಣಗೆರೆ: ನಗರದ ನಿಟುವಳ್ಳಿಯ ಕರಿಯಮ್ಮ ದೇವಸ್ಥಾನದ ಬಳಿಯ ಚಿಕ್ಕನಹಳ್ಳಿಯಲ್ಲಿ ನಡೆದ ತಂದೆ ಹಾಗೂ ಮಗಳ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಜಯಕುಮಾರ್ ಹಾಗೂ ಮೂರು ವರ್ಷದ ಮಾನಸ ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿದ್ದರು. ಬಾಲಕಿ ಮಾನಸಳ ಕುತ್ತಿಗೆಯಲ್ಲಿ ಗಾಯದ ಗುರುತು ಕಂಡಿದ್ದು, ಪುತ್ರಿ ಕೊಂದು ಜಯಕುಮಾರ್ ಫ್ಯಾನಿಗೆ ನೇಣು ಹಾಕಿಕೊಂಡಿರಬಹುದು ಎಂಬ ಶಂಕೆ ಇದೆ. ಶವಪರೀಕ್ಷೆ ವರದಿ ಬಂದ ಬಳಿಕ ಸತ್ಯ ಗೊತ್ತಾಗಲಿದೆ.
ಮೃತ ದೇಹ ಸಿಕ್ಕ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಸಾವಿಗೆ ಅತ್ತೆ, ಮಾವ, ಸಂಬಂಧಿಕರು ನೀಡುತ್ತಿದ್ದ ತೊಂದರೆ ಕಾರಣ, ಮತ್ತು ಪತ್ನಿ ಶೈಲಾಜಾಳ ನಡವಳಿಕೆಯಿಂದ ಬೇಸತ್ತಿದ್ದೇನೆ. ಆತ್ಮಹತ್ಯೆಗೆ ಹಣಕಾಸಿನ ವ್ಯವಹಾರ ಕಾರಣ ಅಲ್ಲ ಎಂದು ಬರೆಯಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.