ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಲಯವಾರು ರಚಿಸಿ, ಸಚಿವರನ್ನು ವಲಯದ ಉಸ್ತುವಾರಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊರೊನಾ ತಡೆಗಟ್ಟಲು ಎಲ್ಲ ರೀತಿಯ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಎಂಟು ವಲಯಗಳಿವೆ. ಬೆಂಗಳೂರಿಗೆ ಸೇರಿದ ಸಚಿವರು ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರಿಗೆ ಉಸ್ತುವಾರಿ ನೀಡಲಾಗಿದೆ ಎಂದರು.
ಇಂದು ಸಂಜೆ ವೇಳೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿರುವ ಸಿಎಂ, ಸಭೆಯಲ್ಲಿ ಯಾವ ಸಚಿವರಿಗೆ ಯಾವ ವಲಯ ಎಂಬುದರ ವಿಂಗಡಣೆ ಮಾಡಲಾಗುತ್ತದೆ. ಆಯಾ ವಲಯದಲ್ಲಿ ಜನಸಂದಣಿ ಪ್ರದೇಶಗಳ ನಿಯಂತ್ರಣ ಮಾಡುವುದು. ಆಯಾ ಭಾಗಗಳನ್ನು ಆಯಾ ಸಚಿವರೇ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಲಾಕ್ಡೌನ್ ಬಗ್ಗೆ ಸದ್ಯ ಯಾವುದೇ ಚರ್ಚೆಯಾಗಿಲ್ಲ. ಜಿಲ್ಲಾವಾರು ನಿಗಾ ವಹಿಸಲು ಸೂಚಿಸಿದ್ದಾರೆ. ವಾರಾಂತ್ಯ ಲಾಕ್ಡೌನ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ತಂಡ ರಚಿಸಲಾಗಿದ್ದು, ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.