ಮುಂದುವರೆದ ಕಾಂಗ್ರೆಸ್ ಸದಸ್ಯರ ಧರಣಿ: ವಿಧಾನಸಭೆ ಕಲಾಪ ನುಂಗಿದ ಯತ್ನಾಳ್ ಹೇಳಿಕೆ! - ಪಾಕ್ ಏಜೆಂಟ್ ಅಂತ ದೂಷಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಅಂತಾ ದೂಷಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸದನದಿಂದ ಉಚ್ಛಾಟಿಸುವಂತೆ ಕೋರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದ್ದಾರೆ.
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಅಂತಾ ದೂಷಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸದನದಿಂದ ಉಚ್ಛಾಟಿಸುವಂತೆ ಕೋರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದ್ದಾರೆ.
ನಿಯಮ 363ರಡಿ ಅರ್ಜಿ ಸಲ್ಲಿಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸದನದಿಂದ ಉಚ್ಛಾಟಿಸುವಂತೆ ಮಾಡಿದ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದೇ ತಡ ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿದರು. ನಿನ್ನೆ ಈ ಸೂಚನೆಯನ್ನು ಮಂಡಿಸಿ ಸಿದ್ದರಾಮಯ್ಯ ಮಾತನಾಡಿದ ಹಿನ್ನೆಲೆಯಲ್ಲಿ ಸದನ ಇಂದಿಗೆ ಮುಂದೂಡಲ್ಪಟ್ಟಿತ್ತು. ಇಂದು ಈ ವಿಷಯವನ್ನು ಬಿಡಿ ಎಂದು ಸ್ಪೀಕರ್ ಮನವಿ ಮಾಡಿಕೊಂಡಿದ್ದರಾದರೂ ಅದು ಫಲ ನೀಡಲಿಲ್ಲ.
ಹೀಗಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸದನ ಎರಡೂವರೆ ಗಂಟೆಗಳ ಕಾಲ ತಡವಾಗಿ ಆರಂಭವಾದಾಗ (1.40) ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸದನದಿಂದ ಉಚ್ಛಾಟಿಸುವಂತೆ ಕೋರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸ್ಪೀಕರ್ ತಿರಸ್ಕರಿಸಿದರು. ಬಸನಗೌಡ ಪಾಟೀಲ್ ಯತ್ನಾಳ್ ಈ ಸದನದ ಸದಸ್ಯರು. ಅವರ ವಿರುದ್ಧ ಹಾಗೆ ಏಕಾಏಕಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ಅವರಿಗೆ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಕರೆದು ಅವಮಾನಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವೇ ಅವರ ಹೇಳಿಕೆಯ ಹಿಂದೆ ಸರ್ಕಾರವೇ ಇದೆ ಎಂದು ಭಾವಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು. ಈ ಹಂತದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಮತ್ತೋರ್ವ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಹೇಡಿ ಎಂದು ಕರೆದಿದ್ದಾರೆ. ಇದು ಸರಿಯಲ್ಲ ಎಂದರು.