ಬೆಂಗಳೂರು: ಸಂಕ್ರಾಂತಿ ಈ ಬಾರಿ ಬೆಂಗಳೂರಿಗರಿಗೆ ಡಬಲ್ ಖುಷಿ ನೀಡಿದೆ. ಹಬ್ಬದ ಸಂಭ್ರಮ ಒಂದೆಡೆಯಾದ್ರೆ, ಟ್ರಾಫಿಕ್ ತಲೆಬಿಸಿ ಇಲ್ಲದೇ ಓಡಾಟಕ್ಕೆ ನೆರವಾಗುವ ನಮ್ಮ ಮೆಟ್ರೋ ವಿಸ್ತರಿತ ಮಾರ್ಗವನ್ನು ಸಿಎಂ ಯಡಿಯೂರಪ್ಪ ಉದ್ಘಾಟನೆಗೊಳಿಸಿದ್ದಾರೆ.
ಕನಕಪುರ ರಸ್ತೆಯ ಯಲಚೇನಹಳ್ಳಿಯಿಂದ ಅಂಜನಾಪುರದ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣದವರೆಗೆ ಇಂದು ಮೊದಲ ಮೆಟ್ರೋ ಓಡಾಟಕ್ಕೆ ಚಾಲನೆ ಸಿಕ್ಕಿದೆ. ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆ ಪೈಕಿ, ಮೊದಲ ಯೋಜನೆ ಇದಾಗಿದ್ದು, ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಗೂ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ನಾಳೆಯಿಂದಲೇ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ. ಇದರಿಂದ ನಗರದಲ್ಲಿ ಉತ್ತರ- ದಕ್ಷಿಣದ ಹಸಿರು ಮಾರ್ಗದ ಉದ್ದ 24.2 ಕಿ.ಮೀನಿಂದ 30.70 ಕಿ.ಮೀ ಹೆಚ್ಚಾಗಲಿದೆ.
ಯಲಚೇನಹಳ್ಳಿಯಿಂದ ಅಂಜನಾಪುರದವರೆಗಿನ (ಸಿಲ್ಕ್ ಸಂಸ್ಥೆ) 6.29 ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು 1,590 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 6.ಕಿ.ಮೀನ ಈ ಮಾರ್ಗದಲ್ಲಿ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ- (ಸಿಲ್ಕ್ ಇನ್ಸ್ಟಿಟ್ಯೂಟ್) (ಅಂಜನಾಪುರ) ಈ 5 ನಿಲ್ದಾಣಗಳು ಇರಲಿವೆ.
ಯೋಜನೆ ಸದ್ಯ 6 ಕಿ.ಮೀ ವಿಸ್ತರಣೆಯಾದ್ದಾಗಿದ್ದು, ಪೂರ್ಣವಾಗುವ ವೇಳೆಗೆ 70 ಕಿ.ಮೀ ಬರಲಿದೆ. ಬನಶಂಕರಿಯಿಂದ ಅಂಜನಾಪುರದವರೆಗೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆಗೆ ಮೆಟ್ರೋ ಸೇವೆ ಲಭ್ಯವಾಗಿರುವುದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ.
ಹೊಸ ಮೆಟ್ರೋ ಮಾರ್ಗದ ವಿಶೇಷತೆಗಳು:
- ಪ್ರತೀ ನಿಲ್ದಾಣಗಳಲ್ಲಿ 8 ಎಸ್ಕಲೇಟರ್ಗಳು, 4 ಎಲಿವೇಟರ್ಗಳು, ಸೇರಿ 40 ಎಸ್ಕಲೇಟರ್ಗಳು, 20 ಎಲಿವೇಟರ್ಗಳನ್ನು ಅಳವಡಿಸಲಾಗಿದೆ.
- 5 ನಿಲ್ದಾಣಗಳ ಮೇಲ್ಭಾಗದಲ್ಲಿ 1.2 ಮೆಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಮೇಲ್ಛಾವಣಿ ಹೊಂದಲಿವೆ
- ಸೌರ ವಿದ್ಯುತ್ ಸ್ಥಾವರ 2021 ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ.
- ಪಾವತಿಸದ ಪ್ರದೇಶಗಳ ಮೂಲಕ ರಸ್ತೆ ದಾಟಲು ಜನರು ನಿಲ್ದಾಣ ಬಳಸಬಹುದು.
- ಪಾವತಿಸಿದ ಪ್ರಯಾಣಿಕರು ಪ್ರದೇಶದಲ್ಲಿ ಶೌಚಾಲಯ ಬಳಸಬಹುದು.
- ಹೊಸ ಐದು ನಿಲ್ದಾಣಗಳಲ್ಲಿ ಒನ್ ನೇಷನ್ ಒನ್ ಕಾರ್ಡ್ ಬಳಕೆ ಮಾಡಬಹುದಾಗಿದೆ.
- ಮೆಟ್ರೋ ಮಾರ್ಗವಿರುವ ಆರು ಕಿ.ಮೀನಲ್ಲಿ ರಸ್ತೆಯನ್ನು 4 ಲೇನ್ ನಿಂದ ಆರು ಲೇನ್ಗೆ ವಿಸ್ತರಿಸಲಾಗಿದೆ.
- ಈ ಮಾರ್ಗಗಳಲ್ಲಿ ಮೊದಲ ರೈಲು ಬೆಳಗ್ಗೆ 7 ಗಂಟೆಗೆ ಆರಂಭವಾಗಿ, ರಾತ್ರಿ 8.55ಕ್ಕೆ ಕೊನೆಯ ರೈಲು ಹೊರಡಲಿದೆ. ಮೆಜೆಸ್ಟಿಕ್ನಿಂದ ಕೊನೆಯ ರೈಲು ಎಲ್ಲಾ ದಿಕ್ಕುಗಳಿಗೆ 9.30ಕ್ಕೆ ಹೊರಡುತ್ತದೆ.
ಉದ್ಘಾಟನೆ ಬಳಿಕ ಮಾತನಾಡಿದ, ಕೇಂದ್ರ ಸಚಿವ ಹರ್ದೀಪ್ ಸಿಂಗ್, ವೇಗವಾದ ಹಾಗೂ ತ್ವರಿತ ಓಡಾಟಕ್ಕೆ ಮೆಟ್ರೋ ಸಹಕಾರಿ. ಯುವಜನರಿಗೆ, ಕೆಲಸಗಾರರಿಗೆ, ಓಡಾಡಲು ಸುಲಭವಾಗಲಿದೆ. ಹೊಸ ಕಾರ್ಡ್ ಒಂದು ಪರಿಚಯಿಸಲಾಗುತ್ತಿದ್ದು, ಇಡೀ ದೇಶದಲ್ಲಿ ಓಡಾಟಕ್ಕೆ ಒಂದೇ ಓಪನ್ ಲೂಪ್ ಕಾರ್ಡ್ ಬಳಕೆಯನ್ನು ಜಾರಿಗೆ ತರಲಾಗುತ್ತಿದೆ. ಸದ್ಯ ದೆಹಲಿಯಲ್ಲಿ ಮಾತ್ರ ಇದೆ. (NCFC) ಜನರ ಜೀವನ ಸುಧಾರಿಸಲಿದೆ. ಇಡೀ ಬೆಂಗಳೂರಿಗೆ ವರದಾನವಾಗಲಿ ಎಂದರು.
ಡಿ.ವಿ.ಸದಾನಂದ ಗೌಡ ಮಾತನಾಡಿ, ಮಾಲಿನ್ಯ ಹೆಚ್ಚಾಗುತ್ತಿರುವ ಸಮಯದಲ್ಲಿ ಖಾಸಗಿ ವಾಹನಗಳ ಬದಲು ಮೆಟ್ರೋ ಸಂಚಾರಕ್ಕೆ ಹೆಚ್ಚು ಒತ್ತುಕೊಡಬೇಕಿದೆ. 13 ಲಕ್ಷ ಜನ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಬೆಂಗಳೂರಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪ್ರಯಾಣಿಸಲು ಸಾಕಷ್ಟು ಸಮಯ ಬೇಕಾಗಿದೆ. ಈ ಸಮಸ್ಯೆಯನ್ನು ಮೆಟ್ರೋ ಸಂಚಾರದಿಂದ ಬಗೆಹರಿಸಬಹುದಾಗಿದೆ. ಜೊತೆಗೆ ಸಬ್ ಅರ್ಬನ್ ರೈಲಿನ ಅಗತ್ಯತೆ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲಾಗಿದೆ. ಶೀಘ್ರವಾಗಿ ಪ್ರಾರಂಭವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಕೆ.ಆರ್.ಪುರಂ ನಿಂದ ಹೆಬ್ಬಾಳದವರೆಗೂ ವಿಸ್ತರಣೆ ಆಗಲಿದೆ. ಜೊತೆಗೆ ನಾಗವಾರ-ಗೊಟ್ಟೆಗೆರೆ ಮಾರ್ಗದಲ್ಲಿ ಸುರಂಗಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ ಎಂದರು. ಇದೇ ವೇಳೆ ನಾಗಸಂದ್ರದ ಬಳಿ ಪಾದಚಾರಿಗಳ ಮೇಲ್ಸೇತುವೆ ಮತ್ತು ಮಹಾತ್ಮ ಗಾಂಧಿ ರಸ್ತೆಯ ಪಾದಚಾರಿಗಳ ಮೇಲ್ಸೇತುವೆಗೆ ಸಿಎಂ ಎಲೆಕ್ಟ್ರಿಕ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಒಂದು ವರ್ಷದಲ್ಲಿ ಬೆಂಗಳೂರು ಚಿತ್ರಣ ಬದಲಾಗಲಿದೆ. ಬೆಂಗಳೂರು ದೇಶದ ಆರ್ಥಿಕ ಬೆಳವಣಿಗೆಗೆ ಹೆಚ್ಚು ಕೊಡುಗೆ ನೀಡುತ್ತಿದೆ. ಕಾಸ್ಮೋಪಾಲಿಟನ್ ಸಿಟಿಯಾಗಿರುವ ನಗರ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ಇದಕ್ಕೆ ತಕ್ಕಂತೆ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಸೌಲಭ್ಯ ಕೊಡಲು ಮೆಟ್ರೋ ಯೋಜನೆ ಜಾರಿಗೊಳಿಸಲಾಗಿದೆ. 2025 ರವೇಳೆಗೆ 175 ಕಿ.ಮೀ ಮೆಟ್ರೋ ಮಾರ್ಗ ವಿಸ್ತರಣೆಗೊಳ್ಳಲಿದೆ. ಮೆಟ್ರೋಗೆ ಹಣಕಾಸಿನ ವ್ಯವಸ್ಥೆ ನೀಡಿರುವ ಜೈಕಾ, ಎಎಫ್ಸಿ, ಏಷ್ಯನ್ ಡೆವಲಪ್ಮೆಂಟ್ ಸಂಸ್ಥೆಗೆ ಧನ್ಯವಾದ ಎಂದರು.
ಬಿಎಮ್ಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಸೇಠ್ ಮಾತನಾಡಿ, ನಾಳೆಯಿಂದ ಹೊಸಮಾರ್ಗದಲ್ಲಿ ಪ್ರಯಾಣಿಕರ ಓಡಾಟಕ್ಕೆ ಪ್ರತೀ ಹತ್ತು ನಿಮಿಷಕ್ಕೆ ಮೆಟ್ರೋ ರೈಲು ಇರಲಿದೆ. ಭಾನುವಾರ ಹದಿನೈದು ನಿಮಿಷಕ್ಕೊಂದು ರೈಲು ಇರಲಿದೆ. ಜನ ಹೆಚ್ಚು ಬಂದಾಗ ಈ ಅವಧಿ ಕಡಿಮೆ ಮಾಡಲಾಗುವುದು. ಆದ್ರೆ ಯಲಚೇನಹಳ್ಳಿಯಿಂದ ನಾಗಸಂದ್ರದವರೆಗೆ ಎಂದಿನಂತೆ ಪ್ರತೀ ಐದು ನಿಮಿಷಕ್ಕೊಂದು ರೈಲು ಇರಲಿದೆ ಎಂದರು.
ಈ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ 7.5 ಕಿ.ಮೀ ಉದ್ದದ ಮೆಟ್ರೋ ಲೈನ್ ಉದ್ಘಾಟನೆಗೊಳ್ಳಲಿದೆ. ಮುಂದಿನ ವರ್ಷ ವೈಟ್ ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ. 2024ರ ವೇಳೆಗೆ ಹಂತ-2 ಅನ್ನು ಪೂರ್ಣವಾಗಿ ಕಾರ್ಯಾಚರಣೆಗೆ ತರಲಾಗುವುದು ಎಂದರು.
ಲಾಕ್ಡೌನ್ ನಂತರ ಯಾವುದೇ ಕಾರ್ಮಿಕರ ಸಮಸ್ಯೆ ಆಗಿಲ್ಲ. ಫೆಬ್ರವರಿಯಲ್ಲಿ 9 ಸಾವಿರ ಇದ್ದ ಸಂಖ್ಯೆ ಈಗ 10 ಸಾವಿರ ಇದೆ. ಮುಂದಿನ ವರ್ಷ ಚಲ್ಲಗಟ್ಟದವರೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ ಆಗಲಿದೆ. ರಾತ್ರಿ ಮೆಟ್ರೋ ಸಂಚಾರ ಮಾಗಡಿ ರಸ್ತೆಯಲ್ಲಿ ಮಾಡುವ ಯೋಜನೆ ಇದೆ ಎಂದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಸುರೇಶ್ ಕುಮಾರ್, ಆರ್.ಅಶೋಕ್, ಬಿ.ಎ.ಬಸವರಾಜ್, ಎಸ್.ಟಿ. ಸೋಮಶೇಖರ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸಂಸದ ಎಂ.ಕೃಷ್ಣಪ್ಪ, ಪಿಸಿ ಮೋಹನ್, ರಾಮಮೂರ್ತಿ, ಶಾಸಕ ಸತೀಶ್ ರೆಡ್ಡಿ ಭಾಗಿಯಾಗಿದ್ದರು.