ಬೆಂಗಳೂರು: ಕ್ಯಾನ್ಸರ್ ಬಾಧೆಗೆ ಪರಿಣಾಮಕಾರಿ ಚಿಕಿತ್ಸೆಯು ಜನರ ಕೈಗೆಟುಕಬೇಕಾದರೆ ದೇಶದಲ್ಲಿ ಕಾರ್ಟಿ ಕಂಪನಿಗಳು ಸ್ಥಾಪನೆಯಾಗಬೇಕು ಎಂದು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ, ವೈದ್ಯವಿಜ್ಞಾನ ಲೇಖಕ ಡಾ. ಸಿದ್ಧಾರ್ಥ ಮುಖರ್ಜಿ ಅಭಿಪ್ರಾಯಪಟ್ಟರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಇಂದು ವರ್ಚುವಲ್ ವೇದಿಕೆ ಮೂಲಕ ಮಾತನಾಡಿದ ಅವರು, ಪಕ್ಕದ ಚೀನಾದಲ್ಲಿ ಇಂತಹ 300 ಕಂಪನಿಗಳಿದ್ದು, ಅಮೆರಿಕದಲ್ಲಿ ನೂರಾರು ಉದ್ದಿಮೆಗಳಿವೆ. ಆದರೆ ಐಟಿ ವಲಯದಲ್ಲಿ ಜಗತ್ತಿಗೆ ಮಾದರಿಯಾಗಿರುವ ಭಾರತದಲ್ಲಿ ಕಾರ್ಟಿ ಕಂಪನಿಗಳು ಇಲ್ಲದಿರುವುದು ನೋವಿನ ಸಂಗತಿ ಎಂದರು.
ನಮ್ಮಲ್ಲಿ ವ್ಯವಸ್ಥೆ ಬದಲಾಗಬೇಕಾಗಿದೆ:
ಭಾರತವು ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಪರಿಣತಿ ಸಾಧಿಸಿರುವುದು ನಿಜ. ಆದರೆ ಇಲ್ಲಿ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳು ಹೆಚ್ಚಾಗಿದ್ದು, ಇದಕ್ಕೆ ಕೈಗೆಟುಕುವಂತಹ ಚಿಕಿತ್ಸೆ ಸಿಗುತ್ತಿಲ್ಲ. ಇದಕ್ಕಾಗಿ ಎಲ್ಲರೂ ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಗೆ ಹೋಗುವುದು ಸಾಧ್ಯವಿಲ್ಲ. ಹಾಗಾಗಿ ನಮ್ಮಲ್ಲಿ ವ್ಯವಸ್ಥೆ ಮತ್ತು ಶೋಧನಾ ನಿಧಿ ಹೂಡಿಕೆದಾರರ ಮನೋಭಾವನೆ ಬದಲಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಕ್ಯಾನ್ಸರ್ ಚಿಕಿತ್ಸೆಗೆ ಈಗ ಕಾರ್ಟಿ ಥೆರಪಿ, ಇಮ್ಯುನೋಥೆರಪಿ, ಜೀನ್ ಥೆರಪಿ, ಜೀನ್ ಎಡಿಟಿಂಗ್ ಸೇರಿದಂತೆ ಮುಂತಾದವು ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಮಗಳಾಗಿವೆ. ಇವು ಕ್ಯಾನ್ಸರ್, ಮೈಲೋಮಾ, ಲಿಂಫೋಮಾ, ಸ್ತನ ಕ್ಯಾನ್ಸರ್ ಮುಂತಾದವನ್ನು ವಾಸಿ ಮಾಡುವಷ್ಟು ಪರಿಣಾಮಕಾರಿಯಾಗಿವೆ ಎಂದು ವಿವರಿಸಿದರು.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಈಗ ರೇಡಿಯೇಷನ್ ಮತ್ತು ಕೀಮೋಥೆರಪಿಗಳಲ್ಲದೇ ಹೊಸ ವಿಧಾನಗಳೂ ಬರುತ್ತಿವೆ. ಆದರೆ, ಇವುಗಳನ್ನು ಸರಿಯಾಗಿ ಗುರುತಿಸುವ ಕೆಲಸವಾಗಿಲ್ಲ. ಚೀನಾ ಸಾಧನೆ ಮಾಡುವುದು ಸಾಧ್ಯವಾದರೆ ಭಾರತವೂ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಕ್ಷೇತ್ರವನ್ನು ರಾಷ್ಟ್ರ ನಿರ್ಮಾಣದ ಭಾಗವೆಂದು ಪರಿಗಣಿಸಬೇಕು. ಇದಕ್ಕಾಗಿ ಸರ್ಕಾರ ಅಮೆರಿಕ ಮಾದರಿಯಲ್ಲಿ ಆಯೋಗ ರಚಿಸಿ, 6 ರಿಂದ 8 ತಿಂಗಳಲ್ಲಿ ವರದಿ ಪಡೆದುಕೊಳ್ಳಬೇಕು. ಜೊತೆಗೆ ಅಗತ್ಯ ಭೂಮಿ ಮೀಸಲಿಟ್ಟು, ಬಂಡವಾಳ ನೆರವು, ತೆರಿಗೆ ಕಡಿತ ಮತ್ತು ಇನ್ನಿತರೆ ಉತ್ತೇಜಕ ಕ್ರಮಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಚಿಕಿತ್ಸೆಗಳು ಜನರಿಗೆ ಅಗ್ಗದ ದರದಲ್ಲಿ ಸಿಗಬೇಕಿದೆ:
ಯಾವ ಚಿಕಿತ್ಸಾ ಕ್ರಮಗಳೂ ಇದ್ದಕ್ಕಿದ್ದಂತೆ ಬರುವುದಿಲ್ಲ. ಒಂದೊಂದರ ಹಿಂದೆಯೂ 25-30 ವರ್ಷಗಳ ಪರಿಶ್ರಮ, ತ್ಯಾಗ ಮತ್ತು ಬದ್ಧತೆ ಇದೆ. ಇವೆಲ್ಲ ಕೇವಲ ಪ್ರಯೋಗಾಲಯಗಳಲ್ಲೇ ಉಳಿದರೆ ವ್ಯರ್ಥ. ಅಮೆರಿಕದಲ್ಲಿ ಒಂದು ಡೋಸ್ ಕಾರ್ಟಿ ಥೆರಪಿಗೆ 4-5 ಸಾವಿರ ಡಾಲರ್ ಆಗುತ್ತದೆ. ಅಲ್ಲಿಯ ಶ್ರೀಮಂತರಿಗೂ ಇದು ಕೈಗೆಟುಕುವುದಿಲ್ಲ. ಹಾಗಾಗಿ ಚಿಕಿತ್ಸೆಗಳು ಜನರಿಗೆ ಅಗ್ಗದ ದರದಲ್ಲಿ ಸಿಗಬೇಕಾದದ್ದು ಮುಖ್ಯ. ಇದನ್ನು ಮಾಡಬೇಕಾದ್ದು ಸರ್ಕಾರದ ಕರ್ತವ್ಯ ಎಂದು ಸಭೆಯಲ್ಲಿ ಪ್ರತಿಪಾದಿಸಿದರು.
ಇದನ್ನೂ ಓದಿ: ರಾಣೆಬೆನ್ನೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ವಾಹನ
ರಾಜ್ಯ ಸರ್ಕಾರದ ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಮುಖ್ಯಸ್ಥೆ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಸಂವಾದವನ್ನು ನಡೆಸಿಕೊಟ್ಟರು.