ದೊಡ್ಡಬಳ್ಳಾಪುರ (ಬೆ.ಗ್ರಾಮಾಂತರ): ನಗರದ ತ್ಯಾಜ್ಯ ನೀರು ಶುದ್ಧೀಕರಣ ಮಾಡುವ ಎಸ್ಟಿಪಿ ಘಟಕದಲ್ಲಿ ಯಂತ್ರಗಳು ಕೈಕೊಟ್ಟ ಹಿನ್ನೆಲೆ, ನಗರಸಭೆ ಸಿಬ್ಬಂದಿ ಮ್ಯಾನ್ಹೋಲ್ ಒಡೆದು ಚಿಕ್ಕತುಮಕೂರು ಕೆರೆಗೆ ತ್ಯಾಜ್ಯ ನೀರನ್ನು ಹರಿಬಿಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ತ್ಯಾಜ್ಯ ನೀರು ಅವೈಜ್ಞಾನಿಕ ಎಸ್ಟಿಪಿ ಘಟಕದ ಮೂಲಕ ಅರ್ಕಾವತಿ ನದಿ ಪಾತ್ರದ ಕೆರೆಗಳ ಒಡಲು ಸೇರುತ್ತಿದೆ. ಕೆರೆ ನೀರು ವಿಷಯುಕ್ತವಾಗಿರುವ ಹಿನ್ನೆಲೆ ಗ್ರಾಮಸ್ಥರು ವೈಜ್ಞಾನಿಕವಾಗಿ ನೀರನ್ನು ಶುದ್ಧೀಕರಣ ಮಾಡಿ ಕೆರೆಗೆ ನೀರು ಬಿಡುವಂತೆ ಜನರು ಒತ್ತಾಯಿಸಿದ್ದರು.
ಆದರೆ, ಸಾರ್ವಜನಿಕರ ಮನವಿಗೆ ಕಿಮ್ಮತ್ತು ನೀಡದ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ಮ್ಯಾನ್ ಹೋಲ್ ಒಡೆದು ಚಿಕ್ಕತುಮಕೂರು ಕೆರೆಗೆ ತ್ಯಾಜ್ಯ ನೀರನ್ನು ಬಿಟ್ಟಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆ ವರ್ತನೆಯಿಂದ ಬೇಸತ್ತ ಸ್ಥಳೀಯರು ಸ್ಥಳಕ್ಕೆ ಪೌರಯುಕ್ತ ಶಿವಶಂಕರ್ ಮತ್ತು ಇಂಜಿನಿಯರ್ ಚಂದ್ರಶೇಖರ್ ಭೇಟಿ ನೀಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಂತಾರಾಜ್ಯ ಜಲ ವ್ಯಾಜ್ಯಗಳ ಕುರಿತು ಕಾನೂನು ತಜ್ಞರೊಂದಿಗೆ ಸಿಎಂ ಸಭೆ..!
STP ಘಟಕದಲ್ಲಿ ಪಂಪ್ ಮಾಡುವ ಯಂತ್ರ ಕೆಟ್ಟಿರುವ ಹಿನ್ನೆಲೆ ಮ್ಯಾನ್ ಹೋಲ್ ಒಡೆದು ಕೆರೆಗೆ ತ್ಯಾಜ್ಯ ನೀರು ಬಿಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಗ್ರಾಮಸ್ಥರು ಮ್ಯಾನ್ ಹೋಲ್ಗೆ ಮಣ್ಣು ತುಂಬಿ ಬಂದ್ ಮಾಡುವ ಎಚ್ಚರಿಕೆ ನೀಡಿದರು.