ಬೆಂಗಳೂರು: ಯಲಹಂಕ ವಲಯದ ಘನತ್ಯಾಜ್ಯ ವಿಭಾಗದ 165 ಕಾರ್ಮಿಕರು ಕಳೆದ ಐದಾರು ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬೆಂಗಳೂರು ಸಿಟಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಅಶೋಕ್ ಸಾಲಪ್ಪ, ಯಲಹಂಕ ವಲಯದ ಪೌರಕಾರ್ಮಿಕರು, ಮೆಕ್ಯಾನಿಕಲ್ ಸ್ವೀಪರ್ಸ್ ಗುತ್ತಿಗೆದಾರರ ಜೊತೆಗೆ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ನಾಲ್ಕೈದು ತಿಂಗಳಿಂದ ಸಂಬಳ ನೀಡಿಲ್ಲ. ಕಳೆದ ಒಂದು ತಿಂಗಳಿಂದ ಬಿಬಿಎಂಪಿಯೇ ಹಾಜರಾತಿ ಸಹಿ ತೆಗೆದುಕೊಳ್ಳುತ್ತಿದೆ.
ಕಾರ್ಮಿಕರ ಐಪಿಡಿ ಸಾಲಪ್ಪ ವರದಿ ಅನುಸಾರ ಪೌರಕಾರ್ಮಿಕರನ್ನು ನೇರ ವೇತನದಡಿ ತನ್ನಿ ಎಂದು ಮನವಿ ಕೊಡಲಾಗಿತ್ತು. ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನೂ ಕೊಡಲಾಗಿದೆ. ಯಲಹಂಕ ವಲಯದ ಜಂಟಿ ನಿರ್ದೇಶಕರನ್ನು ಕೇಳಿದ್ರೆ, ನಮ್ಮ ಬಳಿ ಹಣ ಇಲ್ಲ. ಕೇಂದ್ರ ಕಚೇರಿಯಿಂದ ಹಣ ಬರಬೇಕು ಅಂತಾರೆ. ಇಲ್ಲಿ ಕೇಂದ್ರ ಕಚೇರಿ ಮನವಿಯನ್ನು ಸ್ವೀಕರಿಸುವ ಅಧಿಕಾರಿಗಳೂ ಇಲ್ಲ. ಕಳೆದ ಐದು ತಿಂಗಳಿಂದ ಮನೆ ಬಾಡಿಗೆಯನ್ನೂ ಕಟ್ಟಲಾಗದ ಸ್ಥಿತಿಯಲ್ಲಿ ಕಾರ್ಮಿಕರಿದ್ದಾರೆ ಎಂದರು.
ಕಾರ್ಮಿಕರಾದ ಮಲ್ಲಮ್ಮ ಹಾಗೂ ವಿನೋದಮ್ಮ ಮಾತನಾಡಿ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರುವ ಸ್ಥಿತಿ ಉಂಟಾಗಿದೆ. ಕೆಲಸ ಮಾಡಿಯೂ ಕೆಲಸದ ಹಣ ಸಿಕ್ಕಿಲ್ಲ ಎಂದು ನೋವು ತೋಡಿಕೊಂಡರು. ನಂತರ ಕಾರ್ಮಿಕರ ಮನವಿ ಸ್ವೀಕರಿಸಿದ ಮುಖ್ಯ ಇಂಜಿನಿಯರ್ ವಿಶ್ವನಾಥ್, ಈ ಬಗ್ಗೆ ಆಯುಕ್ತರ ಜೊತೆ ಚರ್ಚೆ ನಡೆಸಲಾಗುವುದು ಎಂದರು.