ಬೆಂಗಳೂರು: ವಿವಿಧ ಸಂಸ್ಥೆಗಳ ವತಿಯಿಂದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕೋವಿಡ್ ನಿರ್ವಹಣೆಗೆ ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರಿಸಲಾಯಿತು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಸಿ.ಐ.ಐ., ಎಂಬೆಸ್ಸಿ ಗ್ರೂಪ್, 3 ಎಂ, ಸ್ವಿಸ್ ರೇ, ಕ್ಯಾಪಿಟಲ್ ಲ್ಯಾಂಡ್ ಹೋಪ್ ಫೌಂಡೇಶನ್, ಆಕ್ಸಾ, ಐ ಕೆಮಾ, ಯೂಯಿಲ್ ಇನ್ ಫ್ರಾಸ್ತ್ರಕ್ಚರ್, ಲೊವ್ಸ್ ಇಂಡಿಯಾ ಹಾಗೂ ಸಂಭವ್ ಪ್ರತಿಷ್ಠಾನಗಳ ಪ್ರತಿನಿಧಿಗಳು ತಮ್ಮ ಸಂಸ್ಥೆಗಳ ವತಿಯಿಂದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ 40 ಐ.ಸಿ.ಯು ಬೆಡ್ಗಳು ಹಾಗೂ ಇತರೆ ವೈದ್ಯಕೀಯ ಉಪಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿದರು.
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಕೋವಿಡ್ ನಿರ್ವಹಣೆಗೆ ಸರ್ಕಾರದ ಜೊತೆ ಕೈಜೋಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಮನವಿಗೆ ಸ್ಪಂದಿಸಿರುವ ರಾಜ್ಯದ ಹಲವು ಸಂಸ್ಥೆಗಳು ತಮ್ಮ ಸಿಎಸ್ಆರ್ ನಿಧಿಯಿಂದ ಕೋವಿಡ್ ನಿರ್ವಹಣೆ ನೆರವಿಗೆ ಸಹಕಾರ ನೀಡುತ್ತಿವೆ.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಹಾಗೂ ಕೋವಿಡ್ 19 ಆಸ್ಪತ್ರೆಗಳ ನಿರ್ಮಾಣಕ್ಕೆ ನೋಡಲ್ ಅಧಿಕಾರಿ ಡಾ. ಪಿ.ಎಸ್. ಹರ್ಷಾ ಹಾಗೂ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.