ಬೆಂಗಳೂರು: ಅಟ್ರಾಸಿಟಿ (ಜಾತಿ ನಿಂದನೆ) ಪ್ರಕರಣಗಳಲ್ಲಿ ಶೇ. 3ರಷ್ಟು ಮಾತ್ರ ಶಿಕ್ಷೆಯಾಗಿದೆ. ರಾಜ್ಯದಲ್ಲಿ ಸುಮಾರು 6,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದಕ್ಕಾಗಿ ವಿಶೇಷ ನ್ಯಾಯಾಲಯ ಇಲ್ಲ. ಅಟ್ರಾಸಿಟಿ ಪ್ರಕರಣಗಳು ಆದಷ್ಟು ಶೀಘ್ರವಾಗಿ ಇತ್ಯರ್ಥ ಆಗಬೇಕು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಎಷ್ಟು ಮರ್ಯಾದಾ ಹತ್ಯೆ ಪ್ರಕರಣ ನಡೆದಿದೆ ಎಂಬ ಬಗ್ಗೆ ಮಾಹಿತಿ ಕೇಳಿದ್ದೇನೆ. ಆರೋಪ ಪಟ್ಟಿ ಸಲ್ಲಿಸದೇ ಇರುವುದು ಪೊಲೀಸರ ವೈಫಲ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
90 ಕಾರ್ಮಿಕರ ಸಾವು: ರಾಜ್ಯದಲ್ಲಿ ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಮ್ಯಾನ್ ಹೋಲ್ ಗುಂಡಿಗೆ ಬಿದ್ದು 1995 ರಿಂದ 2022ರ ವರೆಗೆ ಒಟ್ಟು 90 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಸಂಬಂಧ ಎಷ್ಟು ಮಂದಿ ಗುತ್ತಿಗೆದಾರರ ಮೇಲೆ ಪ್ರಕರಣಗಳು ದಾಖಲಾಗಿದೆ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ 40 ಕಾರ್ಮಿಕರು, ಬೆಂಗಳೂರು ಗ್ರಾಮಾಂತರ- 4, ಮೈಸೂರು- 6, ಮಂಡ್ಯ- 1, ಹಾಸನ- 5, ಕೋಲಾರ- 5, ತುಮಕೂರು- 4, ಚಾಮರಾಜನಗರ- 1, ಶಿವಮೊಗ್ಗ- 4, ರಾಯಚೂರು- 1, ಉಡುಪಿ- 1, ಧಾರವಾಡ- 9, ವಿಜಯಪುರ- 3, ಉತ್ತರ ಕನ್ನಡ- 1, ಕಲಬುರಗಿ- 2, ರಾಮನಗರದಲ್ಲಿ 3 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ, ನರೇಗಾ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆ ಸೇರಿ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರ ಮೇಲೆ ಗರಂ: ಇದೇ ಸಂದರ್ಭದಲ್ಲಿ ಮ್ಯಾನ್ ಹೋಲ್ ಸಚ್ಛತಾ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರ ಸಾವು ಪ್ರಕರಣದ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ತಡಬಡಾಯಿಸಿದರು.
ನಾನು ಹೇಳುವುದನ್ನು ಮೊದಲು ಕೇಳಿ, ಆಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಏರು ಧ್ವನಿಯಲ್ಲಿ ಹೇಳಿದರು. ಮತ್ತೆ ಪತ್ರಕರ್ತರು ಕೇಂದ್ರ ಸಚಿವರಾಗಿ ನಿಮಗೆ ಸರಿಯಾದ ಮಾಹಿತಿ ಇಲ್ಲವೇ? ಎಂದು ಪ್ರಶ್ನಿಸಿದರು. ಆಗ ಮತ್ತಷ್ಟು ಗರಂ ಆದ ನಾರಾಯಣಸ್ವಾಮಿ, ನೀವು ಏನು ಬೇಕಾದರೂ ಬರೆದುಕೊಳ್ಳಿ ಎಂದು ಕೆರಳಿದರು. ಕೊನೆಗೆ ಪತ್ರಕರ್ತರ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ತೆರಳಿದರು.
ಇದನ್ನೂ ಓದಿ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ: ಸಚಿವ ರಾಮುಲು ಕಿಡಿಕಿಡಿ
ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಒಂದಲ್ಲ ಒಂದು ದಿನ ಹಾರಿಸುವುದು ಕೆ.ಎಸ್ ಈಶ್ವರಪ್ಪ ಅವರ ಕನಸು. ಅವರ ಕನಸನ್ನು ನಾನು ಹೇಗೆ ಒಪ್ಪಲಿ ? ಎಂದು ಸಚಿವ ನಾರಾಯಣಸ್ವಾಮಿ ಪ್ರಶ್ನಿಸಿದರು. ಇನ್ನೂ ಹಿಜಾಬ್ ವಿವಾದದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನ್ಯಾಯಾಲಯದ ಆದೇಶ ಪಾಲಿಸುತ್ತೇನೆ ಎಂದ ಸಚಿವರು, ನಾನು ರಾಷ್ಟ್ರಧ್ವಜಕ್ಕೆ ಗೌರವ ಕೊಡುತ್ತೇನೆ ಎಂದರು.