ಬೆಂಗಳೂರು : ಇತ್ತೀಚೆಗೆ ನಿಧನರಾದ ವಿದ್ವಾಂಸ ಡಾ.ಕೆ.ಎಸ್.ನಾರಾಯಣಾಚಾರ್ಯ ಅವರು ರಚಿಸಿರುವ 150ಕ್ಕೂ ಹೆಚ್ಚು ಗ್ರಂಥಗಳನ್ನು ಜನ ಸಮುದಾಯಗಳಿಗೆ ತಲುಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕ್ರಮಕೈಗೊಳ್ಳಲಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದ್ದಾರೆ.
ನಗರದ ಸಂಜಯನಗರದಲ್ಲಿರುವ ನಾರಾಯಣಾಚಾರ್ಯ ಅವರ ಮನೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರೊಂದಿಗೆ ಭೇಟಿ ನೀಡಿ, ಅವರ ಕುಟುಂಬದ ಸದಸ್ಯರಿಗೆ ಜೋಶಿ ಸಾಂತ್ವನ ಹೇಳಿದರು. ನಾರಾಯಣಾಚಾರ್ಯರನ್ನು ಧಾರವಾಡದ ವಿದ್ಯಾರ್ಥಿ ದಿನಗಳಿಂದಲೂ ನಾನು ಬಲ್ಲವನಾಗಿದ್ದೆ.
ಅವರು ಭಾರತದ ಸಂಸ್ಕೃತಿ, ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆಗಳ ಬಗ್ಗೆ ತಲಸ್ಪರ್ಶಿ ಜ್ಞಾನವನ್ನು ಹೊಂದಿದ್ದ ಜ್ಞಾನದ ಪರ್ವತವಾಗಿದ್ದರು ಎಂದು ಸ್ಮರಿಸಿಕೊಂಡರು.
![ನಾರಾಯಣಾಚಾರ್ಯರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ](https://etvbharatimages.akamaized.net/etvbharat/prod-images/kn-bng-04-prahlad-joshi-visit-narayanacharya-house-script-7208080_12122021201449_1212f_1639320289_49.jpg)
ಅವರ ಗ್ರಂಥಗಳನ್ನು ಮರುಮುದ್ರಿಸಿ ತಲುಪಿಸುವ ಬಗ್ಗೆ ಅಶ್ವತ್ಥ್ ನಾರಾಯಣ ಅವರು ಮುಂದಿನ ಹೆಜ್ಜೆ ಇಡಲಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಅಗತ್ಯ ನೆರವು ಕೊಡಲಾಗುವುದು.
ನಾರಾಯಣಾಚಾರ್ಯರ ಬಗ್ಗೆ ಪ್ರಧಾನಿ ಮೋದಿಯವರಿಗೂ ಅಪಾರ ಗೌರವವಿತ್ತು. ಅವರ ನಿಧನದಿಂದ ಸಮಾಜ ಕಳೆಗುಂದಿದೆ ಎಂದು ಅವರು ನುಡಿದರು. ಈ ಸಂದರ್ಭದಲ್ಲಿ ಅವರು ನಾರಾಯಣಾಚಾರ್ಯರ ಗ್ರಂಥಗಳನ್ನು ವೀಕ್ಷಿಸಿದರು.