ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ವಿಶ್ವ ಹಾಲು ದಿನದ ಅಂಗವಾಗಿ ಅರಿಶಿಣ ಮಿಶ್ರಿತ ಹಾಲು ಬಿಡುಗಡೆ ಮಾಡಲಾಯಿತು. ಅಲ್ಲದೆ, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಮೊಬೈಲ್ ವಾಹನಕ್ಕೆ ಚಾಲನೆ ನೀಡಲಾಯಿತು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಅರಿಶಿಣ ಮಿಶ್ರಿತ ಹಾಲು ಉತ್ಪನ್ನವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಕೊರೊನಾ ವೈರಸ್ನಿಂದಾಗಿ ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಹೀಗಾಗಿ ಅರಿಶಿಣಮಿಶ್ರಿತ ಹಾಲನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರ ಮೂಲ ಬೆಲೆ 28 ರೂಪಾಯಿ. ಆದರೆ ರಿಯಾಯಿತಿ ದರದಲ್ಲಿ 3 ತಿಂಗಳ ಕಾಲ 25 ರೂಪಾಯಿಗೆ ಹಾಲನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು. ಹಾಗೇ, ಅಪಾರ್ಟ್ಮೆಂಟ್ಗಳಿಗೆ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಮೊಬೈಲ್ ವಾಹನವನ್ನು ಪರಿಚಯಿಸಲಾಗುತ್ತಿದೆ. ಇಂದು ಒಂದು ವಾಹನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರಾದ್ಯಂತ 10ಕ್ಕೂ ಹೆಚ್ಚು ವಾಹನಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು.